7 rupees

News @ your fingertips

ಡಾಯ್ಚ ಬ್ಯಾಂಕ್ ಭಾರತ ವ್ಯವಹಾರ ಖರೀದಿಸಿದ ಕೋಟಕ್

ಭಾರತೀಯ ವಿತ್ತೀಯ ರಂಗದ ಪ್ರಮುಖ ಖಾಸಗಿ ಬ್ಯಾಂಕ್ ಕೋಟಕ್ ಮಹೀಂದ್ರಾ ಬ್ಯಾಂಕ್‌ಲಿಮಿಟೆಡ್ ಮಂಗಳವಾರ ಮಹತ್ವದ ಬೆಳವಣಿಗೆಯಲ್ಲಿ ಬಹುರಾಷ್ಟ್ರೀಯ ಡಾಯ್ಚ ಬ್ಯಾಂಕ್‌ನ ಭಾರತದ ಚಿಲ್ಲರೆ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣಾ ವ್ಯವಹಾರವನ್ನು 282 ಕೋಟಿಗಳಿಗೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.
ಸ್ವಾಧೀನಪಡಿಸಿಕೊಳ್ಳಲಾಗುತ್ತಿರುವ ಡಾಯ್ಚ ಬ್ಯಾಂಕ್‌ನ ವ್ಯವಹಾರವು ಸುಮಾರು 29,000 ಕೋಟಿ ರೂ.ಗಳ ಸಾಲಗಳು, ರೂ. 16,000 ಕೋಟಿ ರೂ.ಗಳ ಠೇವಣಿಗಳು ಮತ್ತು ನಿರ್ವಹಣೆಯಲ್ಲಿರುವ 10,500 ಕೋಟಿ ರೂ.ಗಳ ಆಸ್ತಿಯನ್ನು ಒಳಗೊಂಡಿದೆ.
ಈ ಮೂಲಕ ಸುಮಾರು 1.5 ಲಕ್ಷ ಗ್ರಾಹಕರು ಇನ್ನೂ ಮುಂದೆ ಕೋಟಕ್ ಬ್ಯಾಂಕ್‌ನೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆ. 1,000 ಉದ್ಯೋಗಿಗಳ ತಂಡವೂ ಕೋಟಕ್ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಈ ಖರೀದಿ ಪ್ರಕ್ರಿಯೆಯೂ 2027 ಸೆಪ್ಟೆಂಬರ್ ಹೊತ್ತಿಗೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಕೋಟಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ವಾಸ್ವಾನಿ ಈ ಮಹತ್ವದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ , ಈ ವ್ಯವಹಾರವು ಉತ್ತಮ-ಗುಣಮಟ್ಟದ ಗ್ರಾಹಕ ಫ್ರಾಂಚೈಸ್ ಮತ್ತು ಅನುಭವಿ ತಂಡವನ್ನು ನಮಗೆ ಒದಗಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಮಾರಾಟವು ಜಾಗತಿಕ ಕಾರ್ಯತಂತ್ರದ ಭಾಗವಾಗಿದೆ. ತನ್ನ ವ್ಯವಹಾರವನ್ನು ಸರಳಗೊಳಿಸುವುದರ ಜೊತೆಯಲ್ಲಿ ಸ್ಪರ್ಧಾತ್ಮಕ ಶಕ್ತಿಯನ್ನು ಹೊಂದಿರುವ ಕ್ಷೇತ್ರಗಳ ಮೇಲೆ ಹೆಚ್ಚು ಕೇಂದ್ರೀಕರಿಸಲು ಇದು ನೆರವಾಗಲಿದೆ ಎಂದು ಡಾಯ್ಚ ಬ್ಯಾಂಕ್ ವಿವರಿಸಿದೆ.
ಕಳೆದ ಮಾರ್ಚ್ 31ರ ಹೊತ್ತಿಗೆ ಕೋಟಕ್ ಮಹೀಂದ್ರಾ ಗ್ರೂಪ್ 5,581 ಶಾಖೆಗಳನ್ನು ಹೊಂದಿದೆ. ಒಟ್ಟು ಆಸ್ತಿ 10,03,353 ಕೋಟಿ ರೂ.ಗಳು.
ಡಾಯ್ಚ ಬ್ಯಾಂಕ್ 45 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಜೊತೆಯಲ್ಲಿ ಗಿಫ್ಟ್ ಸಿಟಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 48 ದೇಶಗಳಲ್ಲಿ ವ್ಯವಹಾರ ಹೊಂದಿರುವ ಬ್ಯಾಂಕ್ ಮುಂದಿನ ದಿನಗಳಲ್ಲೂ ಭಾರತದಲ್ಲಿ ಯುರೋಪಿನ ಪ್ರಮುಖ ಬ್ಯಾಂಕ್ ಆಗಿ ಮುಂದುವರಿಯಲಿದೆ.