7 rupees

News @ your fingertips

ಕ್ಯಾಂಪ್ಕೊ ದಾಖಲೆಯ 3,375 ಕೋಟಿ ವಹಿವಾಟು , ಲಾಭ 49.62 ಕೋಟಿ

ಅಡಿಕೆ ಮಾರುಕಟ್ಟೆಯ ಏರಿಳಿತಗಳು ಮತ್ತು ಕೋಕೋ ವಲಯದ ಸವಾಲಿನ ಪರಿಸ್ಥಿತಿಗಳ ನಡುವೆಯೂ, ಸೆಂಟ್ರಲ್ ಆರ್ಕನೆಟ್ ಅಂಡ್ ಕೊಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) 2025-26ನೇ ಸಾಲಿನಲ್ಲಿ 3,735 ಕೋಟಿಗಳ ದಾಖಲೆ ವ್ಯಾಪಾರ -ವಹಿವಾಟು ನಡೆಸಿದೆ. 49.62 ಕೋಟಿ ರೂ. ತೆರಿಗೆ ಪೂರ್ವ ಲಾಭವನ್ನು ಗಳಿಸುವ ಮೂಲಕ ಉತ್ತಮ ಸಾಧನೆ ದಾಖಲಿಸಿದೆ.
ಈ ವರ್ಷಕ್ಕೆ ನಿರ್ದೇಶಕ ಮಂಡಳಿ ಶೇ. 14 ಡಿವಿಡೆಂಡ್ ಶಿಫಾರಸು ಮಾಡಿದೆ.
ನಿರಂತರ ಸಂಗ್ರಹಣೆ ಮತ್ತು ಮಾರುಕಟ್ಟೆ ಕಾರ್ಯಾಚರಣೆಗಳು, ರೈತ-ಕೇಂದ್ರಿತ ಉಪಕ್ರಮಗಳು, ವ್ಯಾಪಾರ ವೈವಿಧ್ಯೀಕರಣ, ಡಿಜಿಟಲ್ ಪರಿವರ್ತನೆ ಮತ್ತು ಮೂಲಭೂತ ಸೌಕರ್ಯ ಹಾಗೂ ಮೌಲ್ಯವರ್ಧನೆಯ ಮೇಲಿನ ಹೂಡಿಕೆಗಳು ಈ ಈ ಸಾಧನೆಗೆ ಪೂರಕವಾಗಿ ಬೆಂಬಲಿಸಿವೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.
ಅಡಿಕೆ ಕ್ಯಾಂಪ್ಕೊದ ಬೆನ್ನೆಲುಬು. ಪ್ರಮುಖ ವ್ಯವಹಾರ ಚಟುವಟಿಕೆ ಕೂಡಾ. 2025-26ರ ಅವಧಿಯಲ್ಲಿ ಕ್ಯಾಂಪ್ಕೊ 2,924.32 ಕೋಟಿ ಮೌಲ್ಯದ 58,742.76 ಮೆಟ್ರಿಕ್ ಟನ್ ಅಡಿಕೆಯನ್ನು ಸಂಗ್ರಹಿಸಿದೆ. ಅದರಲ್ಲಿ 24,052.07 ಮೆಟ್ರಿಕ್ ಟನ್ ಕೆಂಪಡಿಕೆ ಮತ್ತು 34,690.69 ಮೆಟ್ರಿಕ್ ಟನ್ ಬಿಳಿ ಅಡಿಕೆ ಸೇರಿವೆ.

ಸಹಕಾರ ಸಂಘವು 2,985.19 ಕೋಟಿ ಮೌಲ್ಯದ 59,088.64 ಮೆಟ್ರಿಕ್ ಟನ್ ಅಡಿಕೆಯನ್ನು ಮಾರಾಟ ಮಾಡಿದೆ. ಇದರಲ್ಲಿ 22,914.53 ಮೆಟ್ರಿಕ್ ಟನ್ ಕೆಂಪಡಿಕೆ ಮತ್ತು 36,174.11 ಮೆಟ್ರಿಕ್ ಟನ್ ಬಿಳಿ ಅಡಿಕೆ.
ವ್ಯಾಪಕ ಸಂಗ್ರಹಣೆ ಮತ್ತು ಮಾರುಕಟ್ಟೆ ಜಾಲದ ಮೂಲಕ, ಕ್ಯಾಂಪ್ಕೊ ಬೆಳೆಗಾರರಿಗೆ ವಿಶ್ವಾಸಾರ್ಹ ಮಾರುಕಟ್ಟೆ ವೇದಿಕೆಯನ್ನು ಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ವಿವರಿಸಿದರು.
ಆಮದು ಅಡಿಕೆಯ ಹೆಚ್ಚುತ್ತಿರುವ ಒಳಹರಿವು , ದೇಶೀಯ ಬೆಳೆಗಾರರು ಮತ್ತು ಸಂಘಟಿತ ಮಾರುಕಟ್ಟೆ ಸಂಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಅಮದು ಅಡಿಕೆಯನ್ನು ದೇಶೀಯ ಉತ್ಪನ್ನದೊಂದಿಗೆ ಬೆರೆಸಿ, ದೇಶೀಯ ಉತ್ಪನ್ನವೆಂದು ಚಲಾವಣೆಗೆ ತರುತ್ತಿರುವುದು ಕಳವಳಕಾರಿ. ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸಲು ಸಮನ್ವಯ ಕ್ರಮಗಳ ಬಗ್ಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತರಲಾಗಿದೆ. ಅಲ್ಲದೆ ಆಮದುಗಳ ಮೇಲಿನ ಮೇಲ್ವಿಚಾರಣೆಯನ್ನು ಬಲಪಡಿಸಲು, ಆಮದು ನಿಯಮಗಳನ್ನು ಪರಿಣಾಮಕಾರಿಯಾಗಿ ಜರಗಿಸಲು ಮತ್ತು ಅಕ್ರಮ ಮಿಶ್ರಣವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.
ಕೋಕೋ ಬೆಲೆಗಳ ಅಸ್ಥಿರತೆಯ ನಡುವೆಯೂ ಕ್ಯಾಂಪ್ಕೊ ತನ್ನ ಕೋಕೋ ಮತ್ತು ಚಾಕೊಲೇಟ್ ಕಾರ್ಯಾಚರಣೆಗಳನ್ನು ಬಲಪಡಿಸುತ್ತಿದೆ.ಚಾಕೊಲೇಟ್ ಕಾರ್ಖಾನೆ 12,606.40 ಮೆಟ್ರಿಕ್ ಟನ್ ಉತ್ಪಾದನೆಯನ್ನು ದಾಖಲಿಸಿದೆ, ಮತ್ತು ಕೋಕೋ ಹಾಗೂ ಚಾಕೊಲೇಟ್ ಉತ್ಪನ್ನಗಳ ಮಾರಾಟವು ರಫ್ತು ಸೇರಿದಂತೆ 488.65 ಕೋಟಿಗಳನ್ನು ತಲುಪಿದೆ. ಪ್ರೀಮಿಯಂ ಕ್ಯಾಂಪ್ಕೊ ಚಾಕೊಲೇಟ್ ಶ್ರೇಣಿಯು ಈಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಲಭ್ಯವಿದೆ ಎಂದರು.
ರಬ್ಬರ್ ಮತ್ತು ಕಾಳುಮೆಣಸಿನ ಸಂಗ್ರಹಣೆ ಹಾಗೂ ಮಾರಾಟದ ಮೂಲಕ ತೋಟಗಾರಿಕೆ ಬೆಳೆಗಾರರಿಗೆ ಕ್ಯಾಂಪ್ಕೊ ಬೆಂಬಲವನ್ನು ಮುಂದುವರೆಸಿದೆ. ಈ ವರ್ಷದಲ್ಲಿ 1,704.77 ಮೆಟ್ರಿಕ್ ಟನ್ ರಬ್ಬರ್ ಮತ್ತು 1,656.12 ಮೆಟ್ರಿಕ್ ಟನ್ ಕಾಳುಮೆಣಸನ್ನು ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಬೆಳೆಗಾರರಿಗೆ ಸೇವೆಗಳನ್ನು ಹತ್ತಿರ ತರಲು, ಕ್ಯಾಂಪ್ಕೊ ರಿಪ್ಪನ್‌ಪೇಟೆ, ಚೇಳೂರು ಮತ್ತು ಸರ್ಪಾಡಿಯಲ್ಲಿ ಹೊಸ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದೆ ಹಾಗೂ ಮಥಮಂಗಲ ಮತ್ತು ತಿಪಟೂರಿನಲ್ಲಿ ಹೊಸ ಸ್ವತಂತ್ರ ಶಾಖೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಕ್ಯಾಂಪ್ಕೊ ನ್ಯಾಷನಲ್ ಕೋ-ಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್‌ನ ಸದಸ್ಯನಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ವಿಸ್ತರಿಸುವ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದೆ.ಈ ವರ್ಷ, ಮಾಲ್ಡೀವ್ಸ್‌ಗೆ 130 ಮೆಟ್ರಿಕ್ ಟನ್ ಪ್ರೀಮಿಯಂ ಭಾರತೀಯ ಅಡಿಕೆಯನ್ನು ರಫ್ತು ಮಾಡುವುದರ ಜೊತೆಗೆ, ಕುಡಿಯುವ ಚಾಕೊಲೇಟ್ ಪೌಡರ್ ಮತ್ತು ಕೈಗಾರಿಕಾ ಕೋಕೋ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.
ದುಬೈನ ಗಲ್ಫೂಡ್ ಉತ್ಸವದಲ್ಲೂ ಕ್ಯಾಂಪ್ಕೊ ಭಾಗವಹಿಸಿದ್ದು, ನಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಪ್ರಯತ್ನಿಸಲಾಗಿದೆ ಎಂದರು.