7 rupees

News @ your fingertips

ವೆನಿಜುವೆಲಾ ಭೂಕಂಪ ನೆರವಿಗೆ ಧಾವಿಸಿದ ಭಾರತ

ಬುಧವಾರ ಸಂಭವಿಸಿದ ವೆನಿಜುವೆಲಾ ಭೂಕಂಪದಲ್ಲಿನ ಹಾನಿ ಪ್ರಮಾಣ ಹೆಚ್ಚುತ್ತಿದ್ದು , ಪರಿಹಾರ ಕಾರ್ಯಕ್ಕೆ ವಿಶ್ವದಾದ್ಯಂತದಿಂದ ನೆರವು ಕೂಡಾ ಹರಿದು ಬರುತ್ತಿದೆ.ಈಗ ಸಾವಿನ ಸಂಖ್ಯೆ 235ಕ್ಕೆ ತಲುಪಿದೆ. ಸುಮಾರು 4,300ಕ್ಕಿಂತ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈ ಭೀಕರ ಭೂಕಂಪದಲ್ಲಿ ಅಪಾರ ಪ್ರಮಾಣದ ಅಸ್ತಿಗಳಿಗೆ ಹಾನಿಯುಂಟಾಗಿದೆ.
ಸಹಾಯಹಸ್ತವಾಗಿ ಭಾರತ ಶುಕ್ರವಾರ ಪರಿಹಾರ ಸಾಮಗ್ರಿಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳು ಮತ್ತು ಫೀಲ್ಡ್ ಹಾಸ್ಪಿಟಲ್ ಘಟಕವನ್ನು ರವಾನಿಸಿದೆ.
ಭೂಕಂಪ ಪೀಡಿತ ವೆನೆಜುವೆಲಾವನ್ನು ಬೆಂಬಲಿಸಲು ಭಾರತ ’ಆಪರೇಷನ್ ಅಮಿಸಾದ್’ ಪ್ರಾರಂಭಿಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ವೆನಿಜುವೆಲಾದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ತುರ್ತು ನೆರವಿನೊಂದಿಗೆ ಎರಡು ಸೇನಾ ವಿಮಾನಗಳು ವೆನೆಜುವೆಲಾಕ್ಕೆ ಪ್ರಯಾಣಿಸಿವೆ ಎಂದು ಜೈಶಂಕರ್ ‘ ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಈ ಸಹಾಯವು ಭಾರತೀಯ ಸೇನೆಯ ಫೀಲ್ಡ್ ಹಾಸ್ಪಿಟಲ್ ಘಟಕ ಮತ್ತು 35 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಈ ಕಷ್ಟದ ಸಮಯದಲ್ಲಿ ವೆನೆಜುವೆಲಾ ಸರ್ಕಾರ ಮತ್ತು ಜನರನ್ನು ಬೆಂಬಲಿಸಲು ಭಾರತ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಭೂಕಂಪಗಳಿಂದ ಉಂಟಾದ ವಿನಾಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿ, ಸಾವನ್ನಪ್ಪಿದ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಭಾರತ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ ಎಂದು ಪ್ರಧಾನಿ ಪ್ರಕಟಿಸಿದ ಬಳಿಕ ಈ ತುರ್ತು ಕಾರ್ಯಾಚರಣೆ ಆರಂಭಗೊಂಡಿದೆ.
ಪ್ರಧಾನಿ ಮೋದಿ ಅವರ ‘ಎಕ್ಸ್’ ಪೋಸ್ಟ್ ನಂತರ, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಭಾರತದ ಬೆಂಬಲ ಮತ್ತು ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 235 ಕ್ಕೆ ಏರಿಕೆಯಾಗಿದೆ. 4,300 ಜನರು ಗಾಯಗೊಂಡಿದ್ದಾರೆ . ಇತರ ಹಾನಿ ಬಗ್ಗೆ ಇನ್ನೂ ಸಮೀಕ್ಷೆಗಳು ನಡೆಯುತ್ತಿವೆ. ಪರಿಹಾರ ಕಾರ್ಯಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೆನಿಜುವೆಲಾದ ಆರೋಗ್ಯ ಸಚಿವ ಕಾರ್ಲೋಸ್ ಅಲ್ವಾರಾಡೊ ಗುರುವಾರ ರಾತ್ರಿ ಹೇಳಿದ್ದಾರೆ.