7 rupees

News @ your fingertips

ವೆನಿಜುವಲಾ ಭಾರಿ ಭೂಕಂಪ; ಸಾವು – ನೋವು

ವೆನೆಜುವೆಲಾದಲ್ಲಿ ಬುಧವಾರ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು , ಸಾಕಷ್ಟು ಸಾವು ಹಾನಿ ಸಂಭವಿಸಿದೆ. ಕಂಪನದ ಭೀಕರತೆಗೆ ಕಟ್ಟಡಗಳು ಕುಸಿದು ಬಿದ್ದಿದ್ದು , ನಿವಾಸಿಗಳು ಭಯಭೀತರಾಗಿ ಬೀದಿಗಳಿಗೆ ಓಡಿಬರುವಂತೆ ಮಾಡಿದೆ. ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು, ಅಲ್ಲಿನ ನಿವಾಸಿಗಳು ರಾತ್ರಿಯನ್ನು ಬೀದಿಗಳಲ್ಲಿ ಅಥವಾ ತಮ್ಮ ಸಂಬಂಧಿಕರನ್ನು ಹುಡುಕುತ್ತಾ ಕಳೆದರು. 7.2 ಮತ್ತು 7.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದು , ಕನಿಷ್ಠ 164 ಜನರು ಸಾವನ್ನಪ್ಪಿದ್ದಾರೆ, 900ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. ಈ ಪ್ರಮಾಣ ಹೆಚ್ಚುವ ಸಂಭವವಿದೆ.ಕ್ಯಾರಕಾಸ್‌ನ ಉತ್ತರದಲ್ಲಿರುವ ಲಾ ಗುಯಿರಾ ರಾಜ್ಯವು ತೀವ್ರವಾಗಿ ಹಾನಿಗೊಳಗಾಗಿದೆ.
ಸಿಮೋನ್ ಬೊಲಾವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹಾನಿಯುಂಟಾಗಿದ್ದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಬುಧವಾರ ತಡರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಹಂಗಾಮಿ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್, ಭೂಕಂಪಗಳು ಹಲವು ರಾಜ್ಯಗಳಲ್ಲಿ ಹಾನಿಯನ್ನುಂಟುಮಾಡಿವೆ ಎಂದು ಹೇಳಿದರು
ಹಾನಿಗೊಳಗಾದ ಮನೆಗಳು ಮತ್ತು ಕಟ್ಟಡಗಳು, ಆಸ್ತಿಗಳ ವಿವರಗಳನ್ನು ಅವರು ಪ್ರಕಟಿಸಿಲ್ಲವಾದರೂ, ಎಲ್ಲಾ ಭಾಗಗಳಲ್ಲೂ ರಕ್ಷಣಾ ಮತ್ತು ಮೌಲ್ಯಮಾಪನ ಕಾರ್ಯಗಳು ನಡೆಯುತ್ತಿವೆ. ಜನರು ಸರಕಾರದೊಂದಿಗೆ ಶಾಂತಿಯಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಒಂದು ಶತಮಾನ ಅವಧಿಯಲ್ಲಿ ವೆನೆಜುವೆಲಾವನ್ನು ಅಪ್ಪಳಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಇದು ಒಂದಾಗಿದೆ.
ಭೂಕಂಪಗಳು ಸಂಭವಿಸಿದ ನಂತರ ಫ್ರಾನ್ಸ್ , ಸ್ಪೇನ್ ಮತ್ತು ಯುಎಸ್ ರಕ್ಷಣಾ ತಂಡಗಳನ್ನು ಕಳುಹಿಸಲು ಮುಂದಾಗಿವೆ. ಭಾರತವೂ ವೆನಿಜುವೆಲಾಕ್ಕೆ ಸಂಪೂರ್ಣ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.