ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತಂತೆ ಸದ್ಯದಲ್ಲೇ ಅಂತಿಮ ತೀರ್ಮಾನವಾಗುವ ನಿರೀಕ್ಷೆ ಇದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತಂತೆ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಒಂದೆರಡು ದಿನಗಳಲ್ಲಿ ತಮ್ಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಪ್ರಾಧಿಕಾರದ ವರದಿ ಬಳಿಕ ರಾಜ್ಯ ಸರಕಾರ ಸಚಿವ ಸಂಪುಟವು ಅದನ್ನು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
2033 ರವರೆಗೆ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸುವುದಕ್ಕೆ ನಿರ್ಬಂಧವಿದೆ ಎಂದು ಹೇಳಿದರು. ಆದರೂ ಅಗತ್ಯ ಪ್ರಕ್ರಿಯೆಗಳನ್ನು ಈಗ ಪ್ರಾರಂಭಿಸಿದರೆ, ಆ ಹೊತ್ತಿಗೆ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸಬಹುದು. ವಿಮಾನ ನಿಲ್ದಾಣವನ್ನು ನಿರ್ಮಿಸಲು ಕನಿಷ್ಠ 5-6 ವರ್ಷಗಳು ಬೇಕಾಗುತ್ತದೆ.
ಕನಕಪುರ ರಸ್ತೆಯಲ್ಲಿನ ಚೂಡಹಳ್ಳಿ ಮತ್ತು ಸೋಮನಹಳ್ಳಿ ಮತ್ತು ನೆಲಮಂಗಲ – ಕುಣಿಗಲ್ ರಸ್ತೆಯಲ್ಲಿನ ಒಂದು ಸ್ಥಳ ಅಂತಿಮ ಪಟ್ಟಿಯಲ್ಲಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ಈಗಾಗಲೇ ಎಎಐಗೆ 1.21 ಕೋಟಿ ರೂ.ಗಳನ್ನು ಪಾವತಿಸಿದೆ.
ಕರ್ನಾಟಕ ಗಡಿಗೆ ಸಮೀಪದ ಹೊಸೂರು ಬಳಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ತಮಿಳುನಾಡಿನ ಯೋಜನೆಯ ಬಳಿಕ ಎಚ್ಚೆತ್ತ ಕರ್ನಾಟಕ ಸರಕಾರ ಅದಕ್ಕೆ ಪ್ರತಿಕ್ರಿಯೆ ರೂಪವಾಗಿ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಈ ಪ್ರಸ್ತಾವನೆ ಸಲ್ಲಿಸಿತು.
ಪ್ರಾಧಿಕಾರ ಪರಿಶೀಲನೆ ಮಾಡಿರುವ ಎರಡೂ ಸ್ಥಳಗಳಿಗೆ ಹಸಿರು ನಿಶಾನೆ ತೋರಿಸಬಹುದು. ನಾವು ಒಂದು ಕಡೆ 5,000-6,000 ಎಕರೆ ಭೂಮಿಯನ್ನು ಸಹ ನೀಡಬಹುದು. ಆದರೆ ಖಾಸಗಿ ಕಂಪನಿಗಳು ಆರ್ಥಿಕ ಕಾರ್ಯಸಾಧ್ಯತೆಯಂತಹ ಅಂಶಗಳನ್ನು ಪರಿಗಣಿಸುತ್ತವೆ. ಪ್ರಸ್ತುತ, ನವದೆಹಲಿ ಮತ್ತು ಮುಂಬೈ ಮಾತ್ರ ಎರಡು ವಿಮಾನ ನಿಲ್ದಾಣಗಳನ್ನು ಹೊಂದಿವೆ. ಆ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದ ಕಂಪನಿಗಳೊಂದಿಗೂ ನಾವು ಸಮಾಲೋಚಿಸುತ್ತೇವೆ . ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವ ಸಾಧ್ಯತೆಯನ್ನು ಸಹ ಅನ್ವೇಷಿಸುತ್ತಿದೆ ಎಂದು ಸಚಿವರು ವಿವರಿಸಿದರು.
ಉತ್ತರ ಕರ್ನಾಟಕದ ಶಾಸಕರು ತುಮಕೂರು ಬಳಿ ವಿಮಾನ ನಿಲ್ದಾಣವನ್ನು ಪ್ರತಿಪಾದಿಸುತ್ತಿದ್ದಾರೆ.ಇತರರು ಬೆಂಗಳೂರಿನ ದಕ್ಷಿಣ ಭಾಗವನ್ನು ಸೂಚಿಸುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಅಗತ್ಯಗಳು ಮತ್ತು ಒಟ್ಟಾರೆ ಅನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ನಿರ್ಧಾರದಲ್ಲಿ ಯಾವುದೇ ಅತುರದ ಕ್ರಮದ ಪ್ರಶ್ನೆಯೇ ಇಲ್ಲ. 150 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪನೆಯನ್ನು ನಿರ್ಬಂಧಿಸುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಜೊತೆಗಿನ ವಿಶೇಷ ಷರತ್ತು 2032 ರಲ್ಲಿ ಮುಕ್ತಾಯಗೊಳ್ಳುತ್ತದೆ. ಇದಾದ ಬಳಿಕ 2033 ರ ವೇಳೆಗೆ ಸಂಭಾವ್ಯ ಎರಡನೇ ವಿಮಾನ ನಿಲ್ದಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಭೂಮಿಯ ನಿರ್ಬಂಧಗಳಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರನೇ ರನ್ವೇ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಈ ಹಿಂದೆ ತಿರಸ್ಕರಿಸಿತ್ತು. 2008 ರಲ್ಲಿ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಿದಾಗ ಬೆಂಗಳೂರು ಕೇಂದ್ರದಲ್ಲಿರುವ ಎಚ್ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಮುಚ್ಚಲಾಯಿತು. ಪ್ರಸ್ತುತ ಎಚ್ಎಎಲ್ ವಿಮಾನ ನಿಲ್ದಾಣವನ್ನು ಮಿಲಿಟರಿ, ಚಾರ್ಟಡ್ , ವಿಐಪಿ ವಿಮಾನಗಳಿಗೆ ಮಾತ್ರ ಬಳಸಲಾಗುತ್ತದೆ.
ಮುಂಬೈಯಲ್ಲಿ ಅದಾನಿ ಸಮೂಹ ಸಂಸ್ಥೆ ನಿರ್ಮಿಸಿರುವ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗಷ್ಟೇ ಉದ್ಘಾಟಿಸಿದ್ದರು.
News @ your fingertips
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?