ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲಾಸ್ಕಾ ಶೃಂಗ ಸಭೆಯಲ್ಲಿ ಭೇಟಿಯಾಗಿರುವುದು ಜಾಗತಿಕವಾಗಿ ದೊಡ್ಡ ಸುದ್ದಿಯಾಯಿತು. ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷದ ಸಂದರ್ಭದಲ್ಲಿ ವಿಶ್ವದ ದೊಡ್ಡಣ್ಣಗಳ ಭೇಟಿ ಹೊಸ ವ್ಯಾಖ್ಯಾನಗಳಿಗೂ ಕಾರಣವಾಗಿದೆ.
ಈ ಮಧ್ಯೆ ಸೋಮವಾರ ಬೆಳವಣಿಗೆೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿರುವ ರಷ್ಯಾದ ಅಧ್ಯಕ್ಷ ಪುಟಿನ್ ಅವರು, ಟ್ರಂಪ್ ಅವರೊಂದಿಗಿನ ಅಲಾಸ್ಕಾ ಭೇಟಿ ಹಾಗೂ ಚರ್ಚಿತ ವಿಚಾರಗಳು, ಅವುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕದನ ವಿರಾಮ ಒಪ್ಪಂದವಿಲ್ಲದೆ ಅಲಾಸ್ಕಾ ಉನ್ನತ ಮಟ್ಟದ ಶೃಂಗಸಭೆ ಮುಕ್ತಾಯ ಕಂಡಿದೆ. ಇದಾದ ಮೂರು ದಿನಗಳ ಬಳಿಕ ಪುಟಿನ್ ಅವರು ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಉಕ್ರೇನ್ ಜೊತೆಗಿನ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಭಾರತದ ನಿಲುವನ್ನು ಪ್ರಧಾನಿ ಮೋದಿ ಅವರು ಈ ಸಂಧರ್ಭದಲ್ಲಿ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಪುಟಿನ್ ಕರೆಯ ವಿವರಗಳನ್ನು ಪ್ರಧಾನಿ ಮೋದಿ ‘ಎಕ್ಸ್’ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ನೇಹಿತ ರಷ್ಯಾ ಅಧ್ಯಕ್ಷ ಪುಟಿನ್ ಫೋನ್ ಕರೆ ಮಾಡಿರುವುದನ್ನು ಮತ್ತು ಅವರು ಅಲಾಸ್ಕಾದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಭೇಟಿಯ ಕುರಿತು ಒಳನೋಟಗಳನ್ನು ಹಂಚಿಕೊಂಡಿರುವುದನ್ನು ಮೋದಿ ವಿವರಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದೂ ಹೇಳಿದ್ದಾರೆ.
ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ನಿರಂತರ ವಿನಿಮಯಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ದ್ವಿಪಕ್ಷೀಯ ಸಹಕಾರದ ಹಲವಾರು ವಿಷಯಗಳ ಬಗ್ಗೆಯೂ ಈ ಸಂದರ್ಭದಲ್ಲಿ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುರೋಪಿನ ಇತರ ರಾಷ್ಟ್ರಗಳ ಪ್ರಮುಖ ನಾಯಕರು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡುವ ಕೆಲವು ಗಂಟೆಗಳ ಮೊದಲು ಪುಟಿನ್ ಅವರಿಂದ ಈ ಕರೆ ಬಂದಿದೆ.
ಪುಟಿನ್ -ಟ್ರಂಪ್ ಭೇಟಿ , ಉಕ್ರೇನ್ ಹಾಗೂ ಯುರೋಪಿಯನ್ ರಾಷ್ಟ್ರ ನಾಯಕರ ಜೊತೆ ಮಾತುಕತೆ , ಮೋದಿಗೆ ಜೊತೆ ದೂರವಾಣಿ ಕರೆ … ಜಾಗತಿಕ ಮಟ್ಟದಲ್ಲಿ ಒಂದಿಷ್ಟು ರಾಜಕೀಯ ಬೆಳವಣಿಗೆಗಳು ಈಗ ಕಾಣಸಿಗುತ್ತಿವೆ.
ಈ ಉಪಕ್ರಮಗಳು ಶಾಂತಿ ಸ್ಥಾಪನೆ ಹಾಗೂ ವಾಣಿಜ್ಯ ವಹಿವಾಟುಗಳಿಗೆ ಪೂರಕವಾದರೆ , ಒಂದಿಷ್ಟು ಚಟುವಟಿಕೆಗಳು ಗರಿಗೆದರಲು ಸಾಧ್ಯವಾಗಬಹುದು.
News @ your fingertips
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?