7 rupees

News @ your fingertips

ಮಾರುಕಟ್ಟೆ ಮುಂದೇನು … ಇನ್ನಷ್ಟು ಇಳಿಕೆ ಅಥವಾ ಗಳಿಕೆ ?

ಜಾಗತಿಕ ವಿದ್ಯಮಾನಗಳ ಪರಿಣಾಮ ಸೋಮವಾರ ಭಾರತದ ಷೇರು ಮಾರುಕಟ್ಟೆ ಕೂಡಾ ನಡುಗಿದ್ದು , ದೊಡ್ಡ ಮಟ್ಟದ ಮಾರಾಟ ಪ್ರವೃತ್ತಿ ಕಂಡು ಬಂತು.
ಶುಕ್ರವಾರ ಪ್ರಕಟವಾದ ಯುಎಸ್ ಉದ್ಯೋಗ ದತ್ತಾಂಶಗಳು ನೆಗಟಿವ್ ಆಗಿದ್ದು , ಅರ್ಥಿಕ ಹಿಂಜರಿಕೆಯ ಮುನ್ಸೂಚನೆಯನ್ನು ವ್ಯಕ್ತಪಡಿಸಿದ್ದವು. ಇದರ ಪರಿಣಾಮ ಶುಕ್ರವಾರ ಯುಎಸ್ ಮಾರುಕಟ್ಟೆ ಕುಸಿದಿತ್ತು.ಇದಕ್ಕೆ ಪೂರಕವಾಗಿ ಇತರ ಪಾಶಿಮಾತ್ಯ ಮಾರುಕಟ್ಟೆಗಳೂ ಕೂಡಾ ನೆಗಟಿವ್ ಆಗಿ ಪ್ರತಿಕ್ರಿಯಿಸಿದ್ದವು. ಇದೇ ಹೊತ್ತಿಗೆ ನೆರೆಯ ಬಾಂಗ್ಲಾ ದೇಶದಲ್ಲಿ ಭಾನುವಾರ ಆರಂಭಗೊಂಡ ಹಿಂಸಾಚಾರ ಮಿತಿ ಮೀರಿ ಸೋಮವಾರ ಮಾರುಕಟ್ಟೆಯನ್ನು ಅಲುಗಾಡಿಸಿತು.
ಸೋಮವಾರ ಮುಖ್ಯವಾಗಿ ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡವು. ಮಿಡ್ ಕ್ಯಾಪ್ ಸೂಚ್ಯಂಕ ಶೇ.3.6 ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ.4.21ರಷ್ಟು ಕುಸಿತ ದಾಖಲಿಸಿವೆ. ಸೆಸ್ಸೆಕ್ಸ್ ಶೇ.2.74 ರಷ್ಟು ಕೆಳಗಿಳಿಯಿತು.
ಸದ್ಯ ಹೂಡಿಕೆದಾರರಲ್ಲಿ ಇರುವ ಪ್ರಶ್ನೆ , ಮಾರುಕಟ್ಟೆ ರ‌್ಯಾಲಿ ಮುಗಿದು ಕರೆಕ್ಷನ್ ಆರಂಭವಾಯಿತೇ ? ಅಥವಾ ಸೋಮವಾರದ ಇಳಿಕೆ ತಾತ್ಕಾಲಿಕವೇ ? ಮತ್ತೆ ಹೊಸದಾಗಿ ರ‌್ಯಾಲಿ ಆರಂಭವಾಗಲಿದೆಯೇ ಎನ್ನುವುದು.
ಮಾರುಕಟ್ಟೆ ತಜ್ಞರ ಪ್ರಕಾರ , ಸೋಮವಾರದ ಮಾರುಕಟ್ಟೆ ಪ್ರಕ್ರಿಯೆ ಜಾಗತಿಕ ಮಟ್ಟದ ವಿದ್ಯಮಾನಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ. ವಿದ್ಯಮಾನಗಳು ಇದೇ ರೀತಿಯಲ್ಲಿ ಮುಂದುವರಿದರೆ ಮಾರುಕಟ್ಟೆಯಲ್ಲಿ ಇನ್ನೂ ಸ್ವಲ್ಪ ಹಿಂಜರಿಕೆ ಕಾಣಬಹುದು. ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಸ್ಥಿರವಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಒಮ್ಮೆ ಸ್ಥಿರಗೊಂಡ ಬಳಿಕ ಮತ್ತೆ ರ‌್ಯಾಲಿಯ ನಿರೀಕ್ಷೆ ಇದೆ.
ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಮೌಲ್ಯ ತಾರ್ಕಿಕವಾಗಿಲ್ಲ. ಕೆಲವು ಸ್ಟಾಕ್‌ಗಳಿಗೆ ಅತ್ಯಧಿಕ ಮಟ್ಟದ ಮೌಲ್ಯಮಾಪನ ಮಾಡಲಾಗುತ್ತಿದೆ ಎನ್ನುವ ಮಾತುಗಳು ಮಾರುಕಟ್ಟೆಯಲ್ಲಿ ಆಗಾಗ ಕೇಳಿಬಂದಿವೆ. ಜೊತೆಯಲ್ಲಿ ಮಾರುಕಟ್ಟೆಯಲ್ಲಿ ಕರೆಕ್ಷನ್ ಕೂಡಾ ನಿರೀಕ್ಷಿಸಲಾಗುತ್ತಿತ್ತು. ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಟ ಮಟ್ಟ ದಾಖಲಿಸಿದಾಗ ಇಂತಹ ನಿರೀಕ್ಷೆಗಳು ಸಹಜ.
ಮುಂದಿನ ದಿನಗಳಲ್ಲಿ ಯುಎಸ್ ಬಡ್ಡಿ ದರಗಳ ಬದಲಾವಣೆ ಸಾಧ್ಯತೆ , ಬಾಂಗ್ಲಾ ಪ್ರಧಾನಿ ರಾಜೀನಾಮೆ , ಜಾಗತಿಕವಾಗಿ ಕಾಡುತ್ತಿರುವ ಆರ್ಥಿಕ ಹಿಂಜರಿಕೆ ಅಂಶಗಳು ಇನ್ನೂ ಹಲವು ದಿನ ಮಾರುಕಟ್ಟೆಗೆ ಕಾಡುವ ಸಾಧ್ಯತೆಗಳಿವೆ.