ಕರ್ನಾಟಕ ಹಾಗೂ ಕೇರಳ ರಾಜ್ಯದ ಕೃಷಿಕರ ಅಂತಾರಾಜ್ಯ ಸಂಸ್ಥೆ ಕ್ಯಾಂಪ್ಕೋದ 2025-30ರ ಅವಧಿಗೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಿರ್ದೇಶಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ನೂತನವಾಗಿ ಆಯ್ಕೆಯಾದವರ ಪಟ್ಟಿ ಕೇಂದ್ರ ಸಹಕಾರ ಸಚಿವಾಲಯದ ಸಹಕಾರಿ ಚುನಾವಣಾ ಪ್ರಾಧಿಕಾರದ ಅನುಮೋದನೆ ಪಡೆದ ಬಳಿಕ ಅಧಿಕೃತ ಘೋಷಣೆಯಾಗಲಿದೆ.
ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ಸತತ ಮೂರನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸತೀಶ್ಚಂದ್ರ ಮೊದಲ ಅವಧಿಯಲ್ಲೇ ಕ್ಯಾಂಪ್ಕೋ ಅಧ್ಯಕ್ಷರಾಗಿದ್ದರು. ಪ್ರಸ್ತುತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪದ್ಮರಾಜ ಪಟ್ಟಾಜೆ ಮೊದಲ ಬಾರಿಗೆ ಉಪಾಧ್ಯಕ್ಷರಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 19 ನಿರ್ದೇಶಕರ ಪೈಕಿ ಕೇರಳದ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕರ್ನಾಟಕದ 10 ಮಂದಿಯಲ್ಲಿ ನಾಲ್ವರು ಅವಿರೋಧವಾಗಿ ಹಾಗೂ 6 ಮಂದಿ ಚುನಾವಣೆ ಮೂಲಕ ಆಯ್ಕೆಯಾಗಿದ್ದರು.
ದಯಾನಂದ ಹೆಗ್ಡೆ ಕಾರ್ಕಳ, ಎಂ.ಮಹೇಶ್ ಚೌಟ ಬಂಟ್ವಾಳ, ರಾಧಾಕೃಷ್ಣ ಹೊಸದುರ್ಗ, ಸತ್ಯನಾರಾಯಣ ಪ್ರಸಾದ್ ಕಾರಡ್ಕ, ರಾಘವೇಂದ್ರ ಎಚ್.ಎಂ.ಗರ್ತಿಕೆರೆ, ಸತೀಶ್ಚಂದ್ರ ಭಂಡಾರಿ ಮಂಜೇಶ್ವರ, ತೀರ್ಥರಾಮ ಎ.ವಿ.ಸುಳ್ಯ, ಪುರುಷೋತ್ತಮ ಭಟ್ ಮಂಗಳೂರು, ವೆಂಕಟ್ರಮಣ ಭಟ್ ವೈ. ಪಡ್ರೆ, ವಿವೇಕಾನಂದ ಗೌಡ ಕಾಸರಗೋಡು, ಸದಾನಂದ ಶೆಟ್ಟಿ ಮಂಜೇಶ್ವರ, ಮುರಳೀಕೃಷ್ಣ ಕೆ.ಎನ್.ಸುಳ್ಯ, ಗಣೇಶ್ ಕುಮಾರ್ ಸುಳ್ಯ, ಸೌಮ್ಯಾ ಪ್ರಕಾಶ್ ಮದಂಗಲ್ಲು ಮಂಜೇಶ್ವರ, ವಿಶ್ವನಾಥ್ ಈಶ್ವರ ಹೆಗಡೆ ಕುಮಟಾ ಹಾಗೂ ಗಣೇಶ್ ಬಂಟ್ವಾಳ ನೂತನ ನಿರ್ದೇಶಕರು.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದವರಾದ ಎಸ್.ಆರ್.ಸತೀಶ್ಚಂದ್ರ ಕೃಷಿ ಕುಟುಂಬದಿಂದ ಬಂದವರು. ಎರಡೂವರೆ ದಶಕಗಳಿಂದ ಕ್ರಿಯಾತ್ಮಕ ನಾಯಕತ್ವ ಬೆಳೆಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 2015-2020ರ ಅವಧಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದು, ಕಳೆದ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಕಾಸರಗೋಡಿನ ಬದಿಯಡ್ಕ ಮೂಲದ ಪ್ರಗತಿಪರ ಕೃಷಿಕ ಪದ್ಮರಾಜ್ ಪಟ್ಟಾಜೆ ದೀರ್ಘಕಾಲದಿಂದ ಸಹಕಾರಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಎರಡು ಅವಧಿಗೆ ಕ್ಯಾಂಪ್ಕೊ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?