ಇಂಡಿಗೋ ವಿಮಾನಯಾನದಲ್ಲಿ ಇತ್ತೀಚೆಗೆ ಸೃಷ್ಟಿಸಿದ ಅಡಚಣೆಗಳ ನಂತರ, ದೇಶದ ವಿಮಾನಯಾನ ಕ್ಷೇತ್ರದಲ್ಲಿ ಮತ್ತಷ್ಟು ಸ್ಪರ್ಧೆಯನ್ನು ವಿಸ್ತರಿಸುವ ಹಾಗೂ ವಾಯುಯಾನ ಸೇವೆಯನ್ನು ಸುಲಲಿತಗೊಳಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಇನ್ನೂ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ.
ಈಗಾಗಲೇ ಒಂದು ಸಂಸ್ಥೆಗೆ ಅನಮತಿ ನೀಡಲಾಗಿದ್ದು , ಮಂಗಳವಾರ ಮತ್ತೆರಡು ಸಂಸ್ಥೆಗಳು ಅನುಮತಿ ನೀಡಲಾಗಿದೆ.
ಈ ಮೂಲಕ ವಾಯುಯಾನ ಮಾರುಕಟ್ಟೆಯಲ್ಲಿ ಪೈಪೋಟಿಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎರಡು ಹೊಸ ವಿಮಾನಯಾನ ಅರ್ಜಿದಾರರಾದ ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ಗಳಿಗೆ ಕೇಂದ್ರ ಸರಕಾರ ಮಂಗಳವಾರ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್ಒಸಿ) ನೀಡಿದೆ.
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಮಂಗಳವಾರ ಈ ವಿಷಯವನ್ನು ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ವಿಮಾನಯಾನ ಸಚಿವಾಲಯವು ಕಳೆದ ವಾರದಲ್ಲಿ ಮೂರು ಮಹತ್ವಾಕಾಂಕ್ಷಿ ವಿಮಾನಯಾನ ಸಂಸ್ಥೆಗಳ ತಂಡಗಳೊಂದಿಗೆ ವಿಸೃತ್ತ ಚರ್ಚೆಯನ್ನು ನಡೆಸಿದೆ ಎಂದು ಅವರು ಹೇಳಿದ್ದಾರೆ.
ಶಂಖ್ ಏರ್ ಸಂಸ್ಥೆಗೆ ಈ ಹಿಂದೆ ಎನ್ಒಸಿ ನೀಡಲಾಗಿದೆ. ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ ಸಂಸ್ಥೆಗಳಿಗೆ ಈ ವಾರ ಅನುಮತಿ ನೀಡಲಾಗಿದೆ.
ಭಾರತದ ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಎರಡು ಪ್ರಮುಖ ಸಂಸ್ಥೆಗಳಾದ ಇಂಡಿಗೋ ಮತ್ತು ಟಾಟಾ ಒಡೆತನದ ಏರ್ ಇಂಡಿಯಾ ಗ್ರೂಪ್ ಪ್ರಾಬಲ್ಯ ಹೊಂದಿವೆ. ಇವು ಒಟ್ಟಾಗಿ ಸುಮಾರು ಶೇ.90 ಪ್ರಯಾಣಿಕರ ದಟ್ಟಣೆಯನ್ನು ಹೊಂದಿವೆ. ಆದರೆ ಇತ್ತೀಚಿಗೆ ಇಂಡಿಗೋದಲ್ಲಿ ದೊಡ್ಡ ಪ್ರಮಾಣದ ವಿಮಾನಗಳು ರದ್ದತಿ ಹಾಗೂ ವಿಳಂಬಗೊಂಡಿದ್ದವು. ಈ ಸಮಸ್ಯೆಯಿಂದಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಇದು ದೇಶದಲ್ಲಿ ಇಡೀ ವಾಯುಯಾನ ಸೇವೆಯನ್ನು ಅಸ್ತವ್ಯಸ್ತಗೊಳಿಸಿತ್ತು. ಸಮಸ್ಯೆ ಹಲವು ದಿನಗಳ ಕಾಲ ಮುಂದುವರಿದಾಗ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕಾಗಿ ಬಂತು. ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರ ಹೊಸ ಸಂಸ್ಥೆಗಳಿಗೆ ಅನುಮತಿ ನೀಡುವ ಮೂಲಕ ಇತರ ಸಂಸ್ಥೆಗಳ ಪ್ರಾಬಲ್ಯವನ್ನು ಕಡಿತಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಭಾರತೀಯ ಆಕಾಶದಲ್ಲಿ ತನ್ನ ಸಾಧನೆಯನ್ನು ತೋರಬಯಸಿರುವ ಹೊಸ ವಿಮಾನಯಾನ ಸಂಸ್ಥೆಗಳಾದ ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ಗಳ ತಂಡಗಳನ್ನು ಭೇಟಿ ಮಾಡಲು ಸಂತೋಷವಾಯಿತು ಎಂದು ನಾಯ್ಡು ತನ್ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ಹೊಸ ವಿಮಾನಯಾನ ಸಂಸ್ಧೆಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಅವರು ವಿವರಿಸಿದ್ದಾರೆ.
ಅಲ್ ಹಿಂದ್ ಏರ್ ಕೇರಳ ಮೂಲದ ಅಲ್ಹಿಂದ್ ಗ್ರೂಪ್ನ ಭಾಗವಾಗಿದೆ. ಫ್ಲೈಎಕ್ಸ್ಪ್ರೆಸ್ ಹೈದರಾಬಾದ್ ಮೂಲದ ಕೊರಿಯರ್ ಮತ್ತು ಸರಕು ಸೇವಾ ಕಂಪನಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಲಕ್ನೋ, ವಾರಣಾಸಿ, ಆಗ್ರಾ ಮತ್ತು ಗೋರಖ್ಪುರದಂತಹ ಉತ್ತರ ಪ್ರದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವತ್ತ ಗಮನಹರಿಸಿ, ಪ್ರಾದೇಶಿಕ ಮತ್ತು ಮೆಟ್ರೋ ಮಾರ್ಗಗಳನ್ನು ನಿರ್ವಹಿಸಲು ಶಂಖ್ ಏರ್ ಮುಂದಾಗಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?