7 rupees

News @ your fingertips

ಇಂಡಿಗೋ ಕಾರ್ಯಾಚರಣೆ ಮೇಲ್ವಿಚಾರಣೆಗೆ ತಂಡ, ಹೆಚ್ಚಿದ ಕಣ್ಗಾವಲು

ಇಂಡಿಗೋ ವಿಮಾನಯಾನದಲ್ಲಿನ ಅಡಚಣೆ ಬಳಿಕ ಅದರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಮೇಲ್ವಿಚಾರಣಾ ತಂಡವನ್ನು ರಚಿಸಿದೆ.
ಇದಾದ ಕೆಲವೇ ಹೊತ್ತಿನಲ್ಲಿ ಇಂಡಿಗೋ ನಾಗರಿಕ ವಿಮಾನಯಾನ ಸಚಿವಾಲಯದ ತೀವ್ರ ಪರಿಶೀಲನೆಗೆ ಒಳಗಾಗಿದೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯಾಪಕ ಅಡಚಣೆಗಳು , ಸಾವಿರಾರು ವಿಮಾನ ಯಾನಗಳ ರದ್ದತಿಯ ಬಳಿಕ ಸರಕಾರ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ವಿಮಾನಯಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮೇಲ್ವಿಚಾರಣಾ ತಂಡವನ್ನು ಸ್ಥಾಪಿಸುವುದಲ್ಲದೇ, ನಿರಂತರ ನಿಗಾ ವಹಿಸಲು ಇಬ್ಬರು ಅಧಿಕಾರಿಗಳನ್ನು ಗುರಗಾಂವ್‌ನಲ್ಲಿರುವ ಇಂಡಿಗೋ ಕಾರ್ಪೊರೇಟ್ ಕಚೇರಿಯಲ್ಲಿ ಶಾಶ್ವತವಾಗಿ ನಿಯೋಜಿಸಲು ನಿರ್ಧರಿಸಲಾಗಿದೆ.
ಡಿಜಿಸಿಎ ತನ್ನ ಆದೇಶದಲ್ಲಿ, ಮೇಲ್ವಿಚಾರಣಾ ತಂಡವನ್ನು ರಚಿಸಿ ಪ್ರಕಟಿಸುತ್ತಿದ್ದಂತೆ,ಇಂಡಿಗೋ ವಿಮಾನಯಾನಗಳನ್ನು ಬಿಗಿ ಕಣ್ಗಾವಲಿನಲ್ಲಿರಿಸಲಾಗಿದೆ. ಅದರ ಗುರಗಾಂವ್ ಪ್ರಧಾನ ಕಚೇರಿಗೆ ಇಬ್ಬರು ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ.
ದೇಶಾದ್ಯಂತ ಇಂಡಿಗೋ ಏರ್‌ಲೈನ್ಸ್ ಕಾರ್ಯಾಚರಣೆಗಳಲ್ಲಿ ದೊಡ್ಡ ಪ್ರಮಾಣದ ಅಡಚಣೆ ಸಂಭವಿಸಿ ಲಕ್ಷ್ಷಾಂತರ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿತ್ತು. ಪರಿಸ್ಥಿತಿ ತ್ವರಿತವಾಗಿ ಸುಧಾರಿಸದ ಕಾರಣ ಮೇಲ್ವಿಚಾರಣಾ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಇಂಡಿಗೋ ಸಂಸ್ಥೆಯು 11 ವಿಮಾನ ನಿಲ್ದಾಣಗಳಲ್ಲಿ ವಿಮಾನ ವಿಳಂಬ ಮತ್ತು ರದ್ದತಿ ಸ್ಥಿತಿ, ಟರ್ಮಿನಲ್ ಪ್ರದೇಶಗಳಲ್ಲಿ ದಟ್ಟಣೆ ಮತ್ತು ಚೆಕ್-ಇನ್‌ಗಳು, ವಿಮಾನಯಾನ ಸಹಾಯವಾಣಿಗಳ 24/7 ಸಿಬ್ಬಂದಿ, ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಲಭ್ಯಗಳ ಲಭ್ಯತೆಯನ್ನು ಪರಿಶೀಲಿಸಲು ತಕ್ಷಣ ಸ್ಥಳದಲ್ಲೇ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಮಂಗಳವಾರ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಇಂಡಿಗೋಗೆ ಒಟ್ಟಾರೆ ಮಾರ್ಗದ ಶೇ. 10 ರಷ್ಟು ಕಡಿತಗೊಳಿಸಲು ಆದೇಶಿಸಿದ್ದರು.
ಇದಾದ ಬಳಿಕ ಈಗ ವಿಮಾನ ಯಾನ ಕಾರ್ಯಾಚರಣೆ ಮೇಲ್ವಿಚಾರಣೆ ತಂಡ ರಚಿಸಲು ನಿರ್ಧರಿಸಲಾಗಿದೆ.

 

.