7 rupees

News @ your fingertips

ರಕ್ಷಣಾವಲಯದ ಷೇರುಗಳಿಗೆ ಇನ್ನೂ ಶುಕ್ರದಸೆ , ಕೇಂದ್ರ ಸರಕಾರದಿಂದಲೂ ಭಾರೀ ಅನುದಾನ

ನವೆಂಬರ್ ಬಳಿಕ ರಕ್ಷಣಾವಲಯದ ಷೇರುಗಳಲ್ಲಿ ಏರಿಕೆ ಕಾಣಲಿದೆ ಎನ್ನುವುದು ಷೇರು ಮಾರುಕಟ್ಟೆ ತಜ್ಞರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಜಾಗತಿಕ ಮಟ್ಟದಲ್ಲಿನ ಯುದ್ದ ಸ್ಥಿತಿ , ಮುಂದೆ ಬರಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ , ಅವರು ಈ ಷೇರುಗಳ ಬಗ್ಗೆ ಹೇಳುತ್ತಿದ್ದರು. ಅದರೆ ಆ ಭವಿಷ್ಯಕ್ಕೆ ಮುನ್ನಡಿ ಬರೆದಂತೆ ಕೇಂದ್ರ ಸರಕಾರವೂ ರಕ್ಷಣಾವಲಯದ ಯೋಜನೆಗಳಿಗೆ ಬಹು ದೊಡ್ಡ ಅನುದಾನವನ್ನು ಮಂಜೂರು ಮಾಡಿದೆ.
ರಕ್ಷಣಾ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರವು ಭಾರತೀಯ ಸಶಸ್ತ್ರ ಪಡೆಗಳ 79,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಕೇಂದ್ರ ರಕ್ಷಣಾ ಸಚಿವ ಮಂತ್ರಿ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆ ಒಟ್ಟು 79,000 ಕೋಟಿ ಮೌಲ್ಯದ ಸಶಸ್ತ್ರ ಪಡೆಗಳ ವಿವಿಧ ಪ್ರಸ್ತಾವನೆಗಳನ್ನು ಅನುಮೋದನೆ ದೊರೆತಿದೆ ಎಂದು ಸಚಿವಾಲಯದ ಪ್ರಕಟನೆ ತಿಳಿಸಿದೆ.
ನಾಗ್ ಕ್ಷಿಪಣಿ ವ್ಯವಸ್ಥೆ (ಟ್ರ್ಯಾಕ್ಡ್ ) ಎಂಕೆ-ಐಐ (ಎನ್‌ಎಎಂಐಎಸ್), ಭೂ ಆಧಾರಿತ ಮೊಬೈಲ್ ಎಲಿಂಟ್ ಸಿಸ್ಟಮ್ (ಜಿಬಿಎಂಇಎಸ್ ) ಮತ್ತು ಮೆಟೀರಿಯಲ್ ಹ್ಯಾಂಡ್ಲಿಂಗ್ ಕ್ರೇನ್‌ನೊಂದಿಗೆ ಹೈ ಮೊಬಿಲಿಟಿ ವೆಹಿಕಲ್ಸ್ (ಎಚ್‌ಎಂವಿ) ಖರೀದಿಗಾಗಿ ಒಪ್ಪಿಗೆ ನೀಡಲಾಗಿದೆ.
ಈ ಎಲ್ಲಾ ಕ್ಷಿಪಣಿ ವ್ಯವಸ್ಥೆಗಳು ಮತ್ತು ರಕ್ಷಣಾ ವಾಹನಗಳು ಭಾರತೀಯ ಸೇನೆಯ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಸಚಿವಾಲಯ ತಿಳಿಸಿದೆ.
ನಾಗ್ ಕ್ಷಿಪಣಿ ವ್ಯವಸ್ಥೆ ಖರೀದಿಯು ಶತ್ರುಗಳ ಯುದ್ಧ ವಾಹನಗಳು, ಬಂಕರ್‌ಗಳು ಮತ್ತು ಇತರ ಕ್ಷೇತ್ರ ಕೋಟೆಗಳನ್ನು ತಟಸ್ಥಗೊಳಿಸುವ ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಟಾರ್ಪಿಡೊಗಳು, ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್‌ಗಳು, ಸುಧಾರಿತ ಟ್ರ್ಯಾಕ್ ವ್ಯವಸ್ಥೆಗಳು ಮತ್ತು ಮದ್ದುಗುಂಡುಗಳು ಭಾರತೀಯ ನೌಕಾಪಡೆಗೆ ನೀಡಲಾದ ಉಪಕರಣಗಳಲ್ಲಿ ಸೇರಿವೆ.
76 ಎಂಎಂ ಸೂಪರ್ ರಾಪಿಡ್ ಗನ್ ಮೌಂಟ್‌ಗಾಗಿ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್ಸ್ (ಎಲ್‌ಪಿಡಿ), 30 ಎಂಎಂ ನೇವಲ್ ಸರ್ಫೇಸ್ ಗನ್ (ಎನ್‌ಎಸ್‌ಜಿ), ಅಡ್ವಾನ್ಸ್ಡ್ ಲೈಟ್ ವೇಟ್ ಟಾರ್ಪಿಡೊಗಳು (ಎಎಲ್‌ಡಬ್ಲ್ಯೂಟಿ), ಎಲೆಕ್ಟ್ರೋ ಆಪ್ಟಿಕಲ್ ಇನ್ಫ್ರಾ-ರೆಡ್ ಸರ್ಚ್ ಮತ್ತು ಟ್ರ್ಯಾಕ್ ಸಿಸ್ಟಮ್ ಮತ್ತು ಸ್ಮಾರ್ಟ್ ಮದ್ದುಗುಂಡುಗಳ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ.
ಎಲ್‌ಪಿಡಿಗಳ ಖರೀದಿಯು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯೊಂದಿಗೆ ಉಭಯಚರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತೀಯ ನೌಕಾಪಡೆಗೆ ಸಹಾಯ ಮಾಡುತ್ತದೆ. ಎಲ್‌ಪಿಡಿ ಒದಗಿಸುವ ಸಮಗ್ರ ಸಮುದ್ರ ಸಾಮರ್ಥ್ಯವು ಭಾರತೀಯ ನೌಕಾಪಡೆಗೆ ಶಾಂತಿಪಾಲನಾ ಕಾರ್ಯಾಚರಣೆಗಳು, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಇತ್ಯಾದಿಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ. ಎಲ್‌ಪಿಡಿಗಳು ನೌಕಾಪಡೆಯು ಭಾರೀ ಉಪಕರಣಗಳು ಮತ್ತು ಭೂ ಪಡೆಗಳನ್ನು ಸಾಗಿಸಲು ಬಳಸುವ ಉಭಯಚರ ಯುದ್ಧ ಹಡಗುಗಳಾಗಿವೆ.
ಭಾರತೀಯ ವಾಯುಪಡೆಯ ಹಲವು ಪ್ರಸ್ತಾವನೆಯೂ ಅನುಮೋದನೆಯಲ್ಲಿ ಸೇರಿದೆ.
ಈಗಾಗಲೇ ಹಲವು ಭಾರತೀಯ ಕಂಪೆನಿಯಗಳು ರಕ್ಷಣಾವಲಯದಲ್ಲಿ ತೊಡಗಿಕೊಂಡಿದ್ದು , ಕೇಂದ್ರ ಸರಕಾರದ ಅನುದಾನವೂ ಈ ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ನೀಡಲಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ರಕ್ಷಣಾವಲಯದ ಕೆಲವು ಷೇರುಗಳು ಏರಿಕೆ ಕಾಣುವ ಎಲ್ಲ ಸಾಧ್ಯತೆಗಳಿವೆ.