ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿನ ಸಮಸ್ಯೆಗಳ ಕುರಿತು ಬುಧವಾರ ಮತ್ತಷ್ಟು ವಿವರಣೆ ನೀಡುವಂತೆ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಮತ್ತೊಮ್ಮೆ ಸಮನ್ಸ್ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ತಿಳಿಸಿದ್ದಾರೆ.
ಡಿಸೆಂಬರ್ 6 ರವರೆಗೆ ರದ್ದಾದ ಎಲ್ಲಾ ವಿಮಾನಗಳ ಟಿಕಟ್ ಹಣವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗಿದೆ ಎಂದು ಇಂಡಿಗೋ ಸಿಇಒ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.
ಪ್ರಯಾಣಿಕರಿಗೆ ಟಿಕೆಟ್ ದರ ಮರುಪಾವತಿಗೆ ಸಂಬಂಧಿಸಿದಂತೆ ಇಂಡಿಗೋ ಸಿಇಒಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ,
ವಿಮಾನ ಯಾನದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸಿಇಒ ಪೀಟರ್ ಎಲ್ಬರ್ಸ್ ಅವರನ್ನು ಮಂಗಳವಾರ ಸಚಿವಾಲಯಕ್ಕೆ ಕರೆಸಲಾಗಿತ್ತು. ಡಿಸೆಂಬರ್ 6 ರವರೆಗೆ ಯಾನದಲ್ಲಿನ ವ್ಯತ್ಯಯ ಸಂಬಂಧ ಪ್ರಯಾಣಿಕರಿಗೆ ಶೇ.100 ಮರುಪಾವತಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಮರುಪಾವತಿ ಮತ್ತು ಸಾಮಾನುಗಳ ಹಸ್ತಾಂತರದಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಕೆಲಸಗಳನ್ನು ತ್ವರಿತಗೊಳಿಸಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇಂಡಿಗೋ ಒಟ್ಟಾರೆ ಮಾರ್ಗಗಳನ್ನು ಶೇ. 10 ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ. ಇಂಡಿಗೋ ಈ ಆದೇಶವನ್ನು ಪಾಲಿಸುವುದಾಗಿ ಹೇಳಿದೆ ಎಂದವರು ತಿಳಿಸಿದರು.
ಸದ್ಯದ ಪರಿಸ್ಥಿತಿ ತಿಳಿಗೊಳಿಸುವ ದೃಷ್ಟಿಯಿಂದ ಇಂಡಿಗೋ ಮಾರ್ಗಗಳನ್ನು ಕಡಿತಗೊಳಿಸುವುದು ಅಗತ್ಯವೆಂದು ಸಚಿವಾಲಯ ಪರಿಗಣಿಸಿದೆ. ಇದು ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಯಾನ ರದ್ದತಿಯನ್ನು ಕಡಿಮೆ ಮಾಡುತ್ತದೆ. ಇಂಡಿಗೋ ತನ್ನ ಎಲ್ಲಾ ಗಮ್ಯಸ್ಥಾನಗಳನ್ನು ಹಿಂದಿನಂತೆ ವ್ಯವಸ್ಥಿತಗೊಳಿಸಲಿದೆ ಎನ್ನುವ ನಂಬಿಕೆ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಲ್ಕ ಮಿತಿ ಮತ್ತು ಪ್ರಯಾಣಿಕರ ಅನುಕೂಲ ಕ್ರಮಗಳು ಸೇರಿದಂತೆ ಸಚಿವಾಲಯದ ಎಲ್ಲಾ ನಿರ್ದೇಶನಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಪಾಲಿಸಲು ಇಂಡಿಗೋಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮೊದಲು, ವಾಯುಯಾನ ಸುರಕ್ಷತಾ ನಿಯಂತ್ರಕ ( ಡಿಜಿಸಿಎ ) ಇಂಡಿಗೋದ ವಿಮಾನ ಯಾನಗಳನ್ನು ಶೇ. 5 ರಷ್ಟು ಕಡಿತಗೊಳಿಸುವಂತೆ ಅದೇಶಿಸಿತ್ತು.
News @ your fingertips
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?