7 rupees

News @ your fingertips

ಎಲ್ಲ ಅಂದಾಜುಗಳು ಫೇಲ್, ನಿರೀಕ್ಷೆ ಮೀರಿದ ಜಿಡಿಪಿ ಬೆಳವಣಿಗೆ


20025-26 ಅರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ಎಲ್ಲರ ಅಂದಾಜುಗಳನ್ನು ಮೀರಿಸಿ
ಭಾರತದ ಜಿಡಿಪಿ ಬೆಳವಣಿಗೆ ಕಂಡಿದೆ.
ಭಾರತದ ಅರ್ಥಿಕ ಸ್ಥಿತಿ ಸದೃಢಗೊಳ್ಳುವತ್ತ ಇದೊಂದು ಮಹತ್ತರ ಹೆಜ್ಜೆಯೆಂದು ಅರ್ಥಿಕ ತಜ್ಞರು ಬಣ್ಣಿಸಿದ್ದಾರೆ.
ಜಿಡಿಪಿ ಆರು ತ್ರೈಮಾಸಿಕಗಳ ಗರಿಷ್ಠ ಮಟ್ಟವಾದ ಶೇ. 8.2ಕ್ಕ್ಕೆ ಏರಿದೆ. ಸದೃಢವಾದ ಉತ್ಪಾದನೆ ಮತ್ತು ಬಳಕೆ ಈ ಏರಿಕೆಗೆ ಮಹತ್ತರ ಕಾರಣಗಳಾಗಿವೆ.
ಕಳೆದ (2025) ಅರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 5.6 ರಷ್ಟಿತ್ತು, ಪ್ರಸ್ತುತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಳೆದ ಐದು ತ್ರೈಮಾಸಿಕಗಳ ಗರಿಷ್ಠ ಮಟ್ಟವಾದ ಶೇ.7.8 ರಷ್ಟಿತ್ತು. ಪ್ರಸ್ತುತ ಅದು ಮತ್ತಷ್ಟು ಏರಿಕೆ ಕಂಡಿದೆ.
ದೇಶ ಪ್ರಮುಖ ಅರ್ಥಿಕ ತಜ್ಞರು ಹಾಗೂ ವಿತ್ತೀಯ ಸಂಸ್ಥೆಗಳು ಈ ತ್ರೈಮಾಸಿಕದಲ್ಲಿ ಶೇ.7ರ ಅಸುಪಾಸಿನಲ್ಲಿ ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದ್ದರು. ಅದರೆ ಎಲ್ಲರ ನಿರೀಕ್ಷೆ , ಅಂದಾಜುಗಳನ್ನು ಮೀರಿ ಬಲಿಷ್ಠ ಜಿಡಿಪಿ ಬೆಳವಣಿಗೆ ಸಾಧಿಸಿರುವುದು ವಿತ್ತೀಯ ವಲಯದಲ್ಲಿ ಅಚ್ಚರಿ ಜೊತೆಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಪೂರೈಕೆ ಭಾಗದಲ್ಲಿ, ಉತ್ಪಾದನೆ ಮತ್ತು ಸೇವಾ ವಲಯದ ವಿಭಾಗಗಳು ಉತ್ತಮ ಬೆಳವಣಿಗೆಯನ್ನು ತೋರಿವೆ.
ಉತ್ಪಾದನಾ ಕ್ಷೇತ್ರದಲ್ಲಿ ಶೇ. 9.1 ರಷ್ಟು ಬೆಳವಣಿಗೆ ಮತ್ತು ಒಟ್ಟು ಸ್ಥಿರ ಬಂಡವಾಳ ರಚನೆಯಲ್ಲಿ ಶೇ. 7.3 ರಷ್ಟು ಬೆಳವಣಿಗೆ ಕಂಡುಬಂದಿರುವುದು ಗಮನಾರ್ಹ ಸಾಧನೆಯಾಗಿದೆ. ಖಾಸಗಿ ಬಳಕೆ ವೆಚ್ಚದಲ್ಲಿನ ಶೇ. 7.9 ರಷ್ಟು ಬೆಳವಣಿಗೆ ಬಳಕೆಯ ಪುನರುಜ್ಜೀವನವನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಟ್ರಂಪ್ ಸುಂಕಗಳ ಹೊರತಾಗಿಯೂ ಈ ರೀತಿಯ ಪ್ರಬಲವಾದ ಬೆಳವಣಿಗೆಯು ದೃಢವಾದ ಆರ್ಥಿಕತೆಯ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಎರಡನೇ ತ್ರೈಮಾಸಿಕ ಜಿಡಿಪಿ ಏರಿಕೆ ಆಶ್ಚರ್ಯಕರನೇ. ಯುಎಸ್ ಸುಂಕಗಳು ದೇಶೀಯ ಮಾರುಕಟ್ಟೆ ಮೇಲೆ ಸೀಮಿತ ಪರಿಣಾಮ ಬೀರಿದೆ ಎಂದರ್ಥ. ಅದರೆ ಜಿಎಸ್‌ಟಿ ಕಡಿತ ಮತ್ತು ಹಬ್ಬದಿನಗಳಲ್ಲಿ ಅಧಿಕಗೊಂಡ ಬೇಡಿಕೆಯ ದೊಡ್ಡ ಪರಿಣಾಮವನ್ನು ಇಲ್ಲಿ ಕಾಣ ಬಹುದು ಎನ್ನುವುದು ಕೂಡಾ ಅವರ ಅಭಿಪ್ರಾಯ.
ಅದೇ ಏನೇ ಇರಲಿ, ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಉತ್ಸಾಹ ಕಾಣುವ ಎಲ್ಲ ಸಾಧ್ಯತೆಗಳಿವೆ. ಮಾರುಕಟ್ಟೆ ತಜ್ಞರ ಪ್ರಕಾರ , ಮಾರುಕಟ್ಟೆ ಗ್ಯಾಪ್ ಆಪ್ ಅಗುವ ಎಲ್ಲ ಲಕ್ಷಣಗಳಿವೆ.