ನಂದನ್ ಎಂ ನಿಲೇಕಣಿ ಮತ್ತು ಸುಧಾ ಮೂರ್ತಿ ಸೇರಿದಂತೆ ಇನ್ಫೋಸಿಸ್ನ ಪ್ರವರ್ತಕರು ಮತ್ತು ಪ್ರವರ್ತಕ ಗುಂಪು ಕಂಪೆನಿಯ 18,000 ಕೋಟಿ ರೂ. ಮೌಲ್ಯದ ಷೇರು ಮರುಖರೀದಿಯಲ್ಲಿ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ ನಂತರ ಅಕ್ಟೋಬರ್ 23 ರಂದು ಇನ್ಫೋಸಿಸ್ ಷೇರುಗಳು ಸುಮಾರು ಶೇ.5ರಷ್ಟು ಏರಿಕೆ ಕಂಡಿವೆ.
ಗುರುವಾರ ಕಂಪೆನಿಯ ಷೇರುಗಳು ತಲಾ 1,543.90 ರೂ.ಗಳಲ್ಲಿ ವಹಿವಾಟು ನಡೆಸಿದವು. ಇದು ನಿಫ್ಟಿ ಐಟಿ ಸೂಚ್ಯಂಕದಲ್ಲಿ ಹಾಗೂ ಬೆಂಚ್ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಏರಿಕೆಗೂ ಕಾರಣವಾಯಿತು.
ಸೆಪ್ಟೆಂಬರ್ 11 ರಂದು ನಡೆದ ಇನ್ಫೋಸಿಸ್ ಮಂಡಳಿ ಸಭೆ 18,000 ಕೋಟಿ ರೂ.ಗಳ ಷೇರು ಮರುಖರೀದಿ ಪ್ರಸ್ತಾವನೆಯನ್ನು ಅನುಮೋದಿಸಿತ್ತು.
ಇದು ಸಂಸ್ಥೆಯ ಇದುವರೆಗಿನ ಅತಿದೊಡ್ಡ ಮೊತ್ತದ ಮರು ಖರೀದಿಯಾಗಿದೆ. ಪ್ರತಿ ಷೇರಿಗೆ 1,800 ರೂ.ಗಳಿಗೆ ಮರುಖರೀದಿ ಪ್ರಸ್ತಾವನೆಯನ್ನು ಪ್ರಕಟಿಸಿದೆ.
ಮರುಖರೀದಿ – ಸಂಸ್ಥೆಯ ಒಂದು ಕಾರ್ಪೊರೇಟ್ ಕ್ರಿಯೆ. ಸರಳವಾಗಿ ಹೇಳುವುದಾದರೆ ಕಂಪೆನಿಯು ತನ್ನ ಸ್ವಂತ ಷೇರುಗಳನ್ನು ಅಸ್ತಿತ್ವದಲ್ಲಿರುವ ಷೇರುದಾರರಿಂದ ಮರುಖರೀದಿ ಮಾಡುವ ಪ್ರಕ್ರಿಯೆ. ಸೆಪ್ಟೆಂಬರ್ನಲ್ಲಿ ಮರು ಖರೀದಿ ಘೋಷಿಸಿದ ದಿನದಿಂದ ಷೇರುಗಳು ಸದ್ಯ ಶೇ. 19 ಕ್ಕಿಂತ ಹೆಚ್ಚಿನ ಪ್ರೀಮಿಯಂ ಪಡೆದುಕೊಂಡಿದೆ.
ಆದರೆ ಈಗ ಇನ್ಫೋಸಿಸ್ ಪ್ರವರ್ತಕರು ಮರುಖರೀದಿ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಅಕ್ಟೋಬರ್ 22 ರಂದು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಲಾದ ದಾಖಲೆಯಲ್ಲಿ, ಪ್ರವರ್ತಕರು ಮತ್ತು ಪ್ರವರ್ತಕ ಗುಂಪು ಮರುಖರೀದಿಯಲ್ಲಿ ಭಾಗವಹಿಸುವುದಿಲ್ಲ ಎಂಬ ಮಾಹಿತಿಯನ್ನು ನೀಡಲಾಗಿದೆ.
ಸೆೆಪ್ಟೆಂಬರ್ 30, 2025 ರ ಹೊತ್ತಿಗೆ, ಪ್ರವರ್ತಕರು ಮತ್ತು ಪ್ರವರ್ತಕ ಗುಂಪು ಶೇ. 14.30 ರಷ್ಟು ಪಾಲನ್ನು ಹೊಂದಿದ್ದಾರೆ.ಶೇ. 85.46 ರಷ್ಟು ಸಾರ್ವಜನಿಕರ ಪಾಲು.
ವೈಯಕ್ತಿಕವಾಗಿ ಪ್ರವರ್ತಕರಲ್ಲಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಶೇ. 1.08 ರಷ್ಟು , ಹೊಂದಿದ್ದಾರೆ. ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಕ್ರಮವಾಗಿ ಶೇ. 0.40 ಮತ್ತು ಶೇ. 0.91 ರಷ್ಟು ಪಾಲನ್ನು ಹೊಂದಿದ್ದಾರೆ. ಮೂರ್ತಿ ಅವರ ಮಕ್ಕಳಾದ ರೋಹನ್ ಮೂರ್ತಿ ಮತ್ತು ಅಕ್ಷತಾ ಮೂರ್ತಿ ಕ್ರಮವಾಗಿ ಶೇ. 1.60 ಮತ್ತು ಶೇ. 1.03 ರಷ್ಟು ಪಾಲನ್ನು ಹೊಂದಿದ್ದಾರೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃನ್ ಶೇ. 0.84 ರಷ್ಟು ಪಾಲನ್ನು ಹೊಂದಿದ್ದರೆ, ಪತ್ನಿ ಸುಧಾ ಗೋಪಾಲಕೃಷ್ಣನ್ ಶೇ. 2.52 ರಷ್ಟು ಪಾಲನ್ನು ಹೊಂದಿದ್ದಾರೆ. ಎಲ್ಲಾ ಪ್ರವರ್ತಕರಲ್ಲಿ ಸುಧಾ ಗೋಪಾಲಕೃಷ್ಣನ್ ಅತಿದೊಡ್ಡ ಪಾಲನ್ನು ಹೊಂದಿದ್ದಾರೆ.
ಇನ್ಫೋಸಿಸ್ ಷೇರು ಮರು ಖರೀದಿ , ಹೂಡಿಕೆದಾರರಲ್ಲಿ ಕಂಪೆನಿಯ ಬಗ್ಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಒಂದು ಕ್ರಮ. ಕಂಪೆನಿ ಸದೃಢವಾಗಿದ್ದು , ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸಾಧನೆಯನ್ನು ತೋರಲಿದೆ ಎನ್ನುವ ಧೈರ್ಯವನ್ನು ತುಂಬುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ವಿವರಿಸಿವೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?