ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ದೊಡ್ಡ ಪ್ರಮಾಣದಲ್ಲಿ ಮಾರಾಟ ಕಂಡು ಬಂತು. ಸೆನ್ಸೆಕ್ಸ್ ಸೋಮವಾರ 81,373.75 ರ ಮುಕ್ತಾಯ ಕಂಡಿದ್ದು , ಮಂಗಳವಾರ 81,492.50ರಲ್ಲಿ ಆರಂಭ ಕಂಡು ಬಳಿಕ ನಿಧಾನ ಗತಿಯಲ್ಲಿ ಕುಸಿತ ಕಂಡಿತು. ಸುಮಾರು 800 ಪಾಯಿಂಟ್ಗಳು ಅಥವಾ ಶೇ. 1 ರಷ್ಟು ಕುಸಿತದೊಂದಿಗೆ ದಿನದ ಕನಿಷ್ಠ ಮಟ್ಟವನ್ನು 80,575.09 ಕ್ಕೆ ತಲುಪಿತು. ನಿಫ್ಟಿ ಸೋಮವಾರದ 24,716.60 ರ ಮುಕ್ತಾಯಕ್ಕೆ ಹೋಲಿಸಿದರೆ 24,786.30ರಲ್ಲಿ ಆರಂಭ ಕಂಡಿತು. ನಿರಂತರ ಮಾರಾಟದ ಪರಿಣಾಮ ದಿನದ ಕನಿಷ್ಠ ಮಟ್ಟ 24,502.15 ಕ್ಕೆ ತಲುಪಿತು. ಸೆನ್ಸೆಕ್ಸ್ ದಿನದ ಅಂತ್ಯದಲ್ಲಿ 636 ಪಾಯಿಂಟ್ಗಳು ಕುಸಿತದೊಂದಿಗೆ 80,737.51ರಲ್ಲಿ ಮುಕ್ತಾಯ ಕಂಡರೆ , ನಿಫ್ಟಿ 50 174 ಪಾಯಿಂಟ್ ಕುಸಿತದೊಂದಿಗೆ 24,542.50 ಕ್ಕೆ ಅಂತ್ಯಗೊಂಡಿತು.
ಕಳೆದ ಹಲವು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರವೃತ್ತಿ ಕಂಡು ಬರುತ್ತಿದೆ. ಜಾಗತಿಕ ಹಾಗೂ ದೀಶೀಯ ಜಿಯೋ ಪೊಲಿಟಿಕಲ್ ವಿದ್ಯಮಾನಗಳ ಜೊತೆಯಲ್ಲಿ ಕಂಪೆನಿಗಳ ವಾರ್ಷಿಕ ಗಳಿಕೆಯೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದೂ ಕೂಡಾ ಮಾರುಕಟ್ಟೆಯ ಹಿಂಜರಿತಕ್ಕೆ ಕಾರಣವಾಗಿದೆ.
ಅವುಗಳಲ್ಲಿ ಮುಖ್ಯವಾಗಿ ಕೆಲವು ಅಂಶಗಳನ್ನು ಈ ರೀತಿಯಲ್ಲಿ ಗಮನಿಸಬಹುದು.
ಭಾರತೀಯ ಕಂಪೆನಿಗಳ ಷೇರುಗಳ ಬಗ್ಗೆ ಸಮರ್ಪಕ ಮೌಲ್ಯಮಾಪನದ ಕುರಿತಂತೆ ಕಲವೊಂದು ಅತಂಕಗಳಿರುವುದು. ಕೆಲವೊಂದು ಷೇರುಗಳ ಅತಿಯಾದ ಮೌಲ್ಯಮಾಪನದ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ನಿಫ್ಟಿ 50 ರ ಪ್ರಸಕ್ತ ಪಿ ಇ ಅನುಪಾತ ಅದರ ಒಂದು ವರ್ಷದ ಸರಾಸರಿ ಪಿ ಇ ಗಿಂತ ಅಧಿಕವಾಗಿದೆ.
ಕೆಲವೊಂದು ಕಂಪೆನಿಗಳ ಗಳಿಕೆ ಅದರ ಮೌಲ್ಯಮಾಪನಕ್ಕೆ ಹೊಂದಾಣಿಕೆಯಾಗದಿರುವುದು ಕೂಡಾ ಹೂಡಿಕೆದಾರರಲ್ಲಿ ಅತಂಕಕ್ಕೆ ಕಾರಣವಾಗಿದೆ.
ಇತ್ತೀಚಿಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಪ್ರಕಟಿಸಿರುವ ವ್ಯಾಪಾರ ನೀತಿ, ವಿಶ್ವದಾದ್ಯಂತ ದೊಡ್ಡದಾದ ಗೊಂದಲವನ್ನೇ ಸೃಷ್ಟಿಸಿದೆ. ಅಸಹಜವಾದ ಅಮೆರಿಕದ ಈ ವ್ಯಾಪಾರ ನೀತಿ ಜಾಗತಿಕವಾಗಿ ಹೂಡಿಕೆದಾರರನ್ನು ಎಚ್ಚರಿಸಿದೆ. ಟ್ರಂಪ್ ಅವರ ಸುಂಕ ನೀತಿಗಳ ಬಗ್ಗೆ ಇನ್ನೂ ಯಾವುದೇ ಖಚಿತತೆ ವ್ಯಕ್ತವಾಗದಿರುವುದು ಕೂಡಾ ಮಾರುಕಟ್ಟ್ಟೆಯನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.
ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಂಡು ಬರುತ್ತಿಲ್ಲ. ಮುಖ್ಯವಾಗಿ ಭಾರತ – ಪಾಕಿಸ್ತಾನ ನಡುವಿನ ಯುದ್ದ ಭೀತಿಯಿಂದ ವಿದೇಶಿ ವಿತ್ತೀಯ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದಿವೆ. ಹೊಸ ಹೂಡಿಕೆ ಸಂಬಂಧ ಅವು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಂತಿಲ್ಲ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಐಐಗಳು) ಕಳೆದ ಎರಡು ಅವಧಿಗಳಲ್ಲಿ ಅಮೆರಿಕದ ಬಾಂಡ್ ಇಳುವರಿಯಲ್ಲಿನ ಏರಿಕೆ ಮತ್ತು ಭಾರತೀಯ ಷೇರುಗಳ ಹೆಚ್ಚಿದ ಮೌಲ್ಯಮಾಪನಗಳ ನಡುವಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಸುಮಾರು 9,000 ಕೋಟಿ ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಯಾವಾಗ ಎಫ್ಐಐ ಗಳು ಮಾರಾಟಕ್ಕೆ ಇಳಿಯುತ್ತವೆಯೋ ಸಹಜವಾಗಿ ಮಾರುಕಟ್ಟೆಯಲ್ಲಿ ವ್ಯತಿರಿಕ್ತ ವಾತಾವರಣ ಸೃಷ್ಟಿಯಾಗುತ್ತದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಅಥವಾ ಸಾಮಾನ್ಯ ಹೂಡಿಕೆದಾರರು ಖರೀದಿಸಲು ಅನುಕೂಲವಾಗುವಂತ ವಾತಾವರಣ ಕಂಡು ಬರುತ್ತಿಲ್ಲ. ಮಾರ್ಚ್ಗೆ ಅಂತ್ಯಗೊಂಡ ಅರ್ಥಿಕ ವರ್ಷದ ಫಲಿತಾಂಶಗಳು ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿಲ್ಲ. ನೀರಸ ಫಲಿತಾಂಶಗಳು, ವಿಸ್ತೃತ ಮೌಲ್ಯಮಾಪನಗಳು ಮತ್ತು ಸುಂಕ-ಸಂಬಂಧಿತ ಅನಿಶ್ಚಿತತೆಯ ನಡುವೆ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಸಕಾರಾತ್ಮಕ ಅಂಶಗಳು ಕಂಡು ಬಂದಿಲ್ಲ.
ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳು ಹೆಚ್ಚಾಗಿ ಸ್ಥಿರವಾಗಿದ್ದರೂ, ಮಾರುಕಟ್ಟೆ ಭಾವನೆಗೆ ಅವು ಪೂರಕವಾಗಿರಲಿಲ್ಲ.
ಮುಂಗಡ ಗಳಿಕೆಯ ಪರಿಷ್ಕರಣೆಗಳು ಕೆಳಮಟ್ಟದಲ್ಲಿರುವ ಕಾರಣ ಕಂಪೆನಿಗಳ ಕುರಿತಂತೆ ಹೂಡಿಕೆದಾರರಲ್ಲಿ ಭರವಸೆ ಮಾಡಿಸುವಲ್ಲಿ ಯಶಸ್ಸು ಗಳಿಸಿಲ್ಲ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು .
ಭಾರತದ ಬೆಳವಣಿಗೆಯ ಮುನ್ನೋಟವೇನೋ ಚೆನ್ನಾಗಿದೆ. ಜೂನ್ 6 ರಂದು ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದೆ. 50 ಬೇಸಿಸ್ ಪಾಯಿಂಟ್ ಬಡ್ಡಿ ದರ ಕಡಿತವನ್ನು ನಿರೀಕ್ಷಿಸಲಾಗುತ್ತಿದೆ. ಅದರೆ ಮಾರುಕಟ್ಟೆ ಮೇಲೆ ಇದರ ಪರಿಣಾಮವೇನು ಎನ್ನುವುದನ್ನು ಈಗಲೇ ನಿರೀಕ್ಷಿಸುವುದು ಕಷ್ಟ.
ಜಾಗತಿಕವಾಗಿ ಪರಿಸ್ಥಿತಿ ತಿಳಿಗೊಳ್ಳುವ ತನಕ ಮಾರುಕಟ್ಟೆಯಲ್ಲೂ ಒಂದಿಷ್ಟು ಏರಿಳಿತಗಳು ಮುಂದುವರಿಯುವುದು ಖಚಿತ.
.
News @ your fingertips
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ