7 rupees

News @ your fingertips

ಚಿನ್ನ ಸಾಲ ಮಾರ್ಗಸೂಚಿ ಸರಳೀಕರಣ

ಸಣ್ಣ ಸಾಲಗಾರರಿಗೆ ಅನುಕೂಲವಾಗುವಂತೆ ಚಿನ್ನ ಅಡವು ಸಾಲದ ಕುರಿತ ಕರಡು ಮಾರ್ಗಸೂಚಿಯನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾಕ್ಕೆ ಸಲಹೆ ಮಾಡಿದ್ದಾರೆ.
2 ಲಕ್ಷ ರೂ.ವರೆಗೆ ಸಾಲ ಪಡೆಯುವವರಿಗೆ ಯಾವುದೇ ಸಮಸ್ಯೆಗಳಾಗದಂತೆ ಮಾರ್ಗಸೂಚಿಯನ್ನು ಸರಳೀಕರಿಸುವಂತೆ ಸಚಿವರು ಶುಕ್ರವಾರ ಸೂಚನೆ ನೀಡಿದ್ದಾರೆ.
ಸಚಿವರ ಸಲಹೆ ಸಾಮಾಜಿಕ ಜಾಲ ತಾಣಗಳಲ್ಲಿ ಹೊರ ಬೀಳುತ್ತಿದ್ದಂತೆ ಚಿನ್ನ ಅಡವು ಸಾಲ ನೀಡುವ ಪ್ರಮುಖ ವಿತ್ತೀಯ ಸಂಸ್ಥೆಗಳಾದ ಮುತ್ತೂಟ್ಟು ಫೈನಾನ್ಸ್ , ಮಣಪ್ಪುರಂ ಫೈನಾನ್ಸ್ ಷೇರುಗಳಲ್ಲಿ ಉತ್ತಮ ಗಳಿಕೆ ಕಂಡಿದೆ. ಬ್ಯಾಂಕೇತರ ವಲಯದ ಈ ಸಂಸ್ಧೆಗಳು ಅಧಿಕ ಮಟ್ಟದಲ್ಲಿ ಚಿನ್ನ ಅಡವು ಸಾಲವನ್ನು ನೀಡುತ್ತಿವೆ.
ಚಿನ್ನವನ್ನು ಅಡವು ಇಟ್ಟು ಸಾಲ ಪಡೆಯುವ ಸಣ್ಣ ಸಾಲಗಾರರಿಗೆ ಯಾವುದೇ ಪ್ರತಿಕೂಲವಾಗದಂತೆ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ . ಈ ಹೊಸ ಮಾರ್ಗಸೂಚಿಗಳು 2026 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಸಾಕಷ್ಟು ಸಮಯದ ಅಗತ್ಯವಿದೆ. ಜೊತೆಯಲ್ಲಿ ಸಣ್ಣ ಸಾಲಗಾರರಿಗೆ ಯಾವುದೇ ತೊಂದರೆಗಳು ಉಂಟಾದಂತೆ ಸಕಾಲದಲ್ಲಿ ಸಾಲ ಲಭ್ಯವಾಗುವಂತೆ ನೆರವಾಗುವ ಮಾರ್ಗಸೂಚಿಗಳನ್ನು ರಚಿಸಬೇಕಿದೆ. ಈಗಾಗಲೇ ರೂಪಿಸಲಾಗಿರುವ ಕರಡು ಮಾರ್ಗಸೂಚಿಗಳ ಕುರಿತಂತೆ ಬಂದಿರುವ ಸಲಹೆ ಸೂಚನೆಗಳನ್ನು ಕೂಡಾ ಆರ್‌ಬಿಐ ಪರಿಶೀಲಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಚಿನ್ನದ ಮೇಲಿನ ಸಾಲ ಕುರಿತಂತೆ ಆರ್‌ಬಿಐ ಕಳೆದ ಎಪ್ರಿಲ್ 9ರಂದು ಕರಡು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಚಿನ್ನದ ಮೇಲಿನ ಸಾಲವನ್ನು ಹೆಚ್ಚು ಸುಲಲಿತಗೊಳಿಸುವುದು ಇದರ ಮೂಲ ಉದ್ದೇಶವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಚಿನ್ನ ಅಡವು ಸಾಲದ ಪ್ರಮಾಣ ಅಧಿಕಗೊಳ್ಳುತ್ತಿದೆ. ಬ್ಯಾಂಕ್‌ಗಳಲ್ಲಿ ದಾಖಲೆ ಹಾಗೂ ಇತರ ಪ್ರಕ್ರಿಯೆಗಳು ಕಡಿಮೆ ಇರುವ ಕಾರಣ ಚಿನ್ನದ ಮೇಲಿನ ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಅರ್ಥಿಕ ವಿಶ್ಲೇಷಕರು.
ಬ್ಯಾಂಕೇತರ ಖಾಸಗಿ ವಿತ್ತೀಯ ಸಂಸ್ಧೆಗಳು ಚಿನ್ನದ ಮೇಲಿನ ಸಾಲಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಅಲ್ಲಿನ ಕೆಲವು ಪ್ರಕ್ರಿಯೆಗಳು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸಕಾಲದಲ್ಲಿ ಸಣ್ಣ ಸಾಲಗಾರರಿಗೆ ಸಾಲ ಲಭಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿದ್ದವು.