7 rupees

News @ your fingertips

Golden bull and bear on stock data chart background. Investing, stock exchange financial bearish and mullish market concept. 3d illustration

ಮಾರುಕಟ್ಟೆ ಕುಸಿತ ಐದು ಕಾರಣಗಳು

ಭಾರತೀಯ ಷೇರು ಮಾರುಕಟ್ಟೆ ಕಳೆದ ಐದು ಟ್ರೇಡಿಂಗ್ ಅವಧಿಯಿಂದ ಸ್ವಲ್ಪ ಮಟ್ಟಿನ ಇಳಿಮುಖ ಹಾದಿ ಹಿಡಿದಿದೆ.
ಗುರುವಾರ ಕೂಡಾ ಆರಂಭಿಕ ಕುಸಿತ ಕಂಡ ಮಾರುಕಟ್ಟೆ ನಂತದ ಅವಧಿಯಲ್ಲಿ ಚೇತರಿಸಿಕೊಂಡರೂ , ಮೇಲ್ಮಟ್ಟದಲ್ಲಿ ಸ್ಥಿರವಾಗದೆ ನೆಗೆಟಿವ್‌ನಲ್ಲೇ ಕೊನೆಗೊಂಡಿದೆ.
ಕಳೆದ ಐದು ದಿನಗಳ ಅವಧಿಯಲ್ಲಿ ನಿಫ್ಟಿ 24100 ಅಂಕಗಳವರೆಗೆ ಕುಸಿದು 590 ಅಂಕಗಳನ್ನು ಕಳೆದುಕೊಂಡಿದೆ . ಸೆಸ್ಸೆಕ್ಸ್ 79447 ಅಂಕಗಳಿಗೆ ತಲುಪಿ , 1866 ಅಂಕಗಳ ಹಿಂಜರಿಕೆ ಕಂಡಿದೆ. ಬ್ಯಾಂಕ್ ನಿಫ್ಟಿ 2060 ಅಂಕಗಳಷ್ಟು ಕೆಳಗೆ ಬಂದಿದೆ.
ಬಹಳ ವೇಗವಾಗಿ ಏರಿಕೆ ಕಾಣುತ್ತಿದ್ದ ಮಾರುಕಟ್ಟೆ ಈ ರೀತಿಯಲ್ಲಿ ಕುಸಿತ ಕಾಣಲು ಪ್ರಾಫಿಟ್ ಬುಕ್ಕಿಂಗ್ ( ಲಾಭಗಳಿಗೆ ಮಾರಾಟ )ಒಂದೇ ಕಾರಣವಲ್ಲ. ಪ್ರಾಫಿಟ್ ಬುಕ್ಕಿಂಗ್ ಅನ್ನೋದು ಸಹಜ ಹಾಗೂ ನಿರಂತರವಾಗಿ ಮಾರುಕಟ್ಟೆಯಲ್ಲಿ ಕಂಡು ಬರುವ ಪ್ರಕ್ರಿಯೆ.ಅದರೆ ಆ ಟ್ರೆಂಡ್ ನಿರಂತರವಾಗುವುದು ಕಡಿಮೆ. ಪ್ರಾಫಿಟ್ ಬುಕ್ಕಿಂಗ್‌ನಲ್ಲಿ ಕುಸಿದಷ್ಟೇ ವೇಗವಾಗಿ ಏರಿಕೆಯೂ ಕಂಡು ಬರುತ್ತದೆ. ಆದರೆ ಇಂದಿನ ಪರಿಸ್ಥಿತಿ ತುಸು ಭಿನ್ನವಾಗಿ ಕಾಣುತ್ತಿದೆ.
ಇಂದಿನ ಮಾರುಕಟ್ಟೆ ಸ್ಥಿತಿ ಬಗ್ಗೆ ಪ್ರಾಫಿಟ್ ಬುಕ್ಕಿಂಗ್ ಹೊರತಾದ ಐದು ಕಾರಣಗಳನ್ನು ಮಾರುಕಟ್ಟೆ ವಿಶ್ಲೇಷಕರು ಗುರುತಿಸಿದ್ದಾರೆ.
1) ಕೇಂದ್ರ ಸರಕಾರ ಬಜೆಟ್
ಪ್ರಧಾನಿ ಮೋದಿ ನೇತೃತ್ವದ ಹೊಸ ಸರಕಾರದ ಬಜೆಟ್ ಬಗ್ಗೆ ಮಾರುಕಟ್ಟೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿತ್ತು. ಅದರೆ ಕಳೆದ ವಾರ ಮಂಡನೆಯಾದ ಬಜೆಟ್ ಮಾರುಕಟ್ಟೆ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಫೆಬ್ರವರಿಯಲ್ಲಿ ಮಂಡನೆಯಾದ ಮಧ್ಯಂತರ ಬಜೆಟ್‌ನ ಮುಂದುವರಿದ ಭಾಗ ಇದಾಗಿದೆ ಎನ್ನುವುದು ಮಾರುಕಟ್ಟೆ ಮಂದಿಯ ಅನಿಸಿಕೆ. ಜೊತೆಯಲ್ಲಿ ಇಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿಲ್ಲ ಎನ್ನುವ ಅಭಿಪ್ರಾಯವೂ ಮಾರುಕಟ್ಟೆಯಲ್ಲಿದೆ. ಹಾಗಾಗಿ ಷೇರು ಮಾರುಕಟ್ಟೆ ಬಜೆಟ್‌ಗೆ ಚಿಯರ್ಸ್‌ ಹೇಳಲೇ ಇಲ್ಲ.
2) ತ್ರೈಮಾಸಿಕ ಫಲಿತಾಂಶಗಳು
ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕ ಫಲಿತಾಂಶಗಳು ಬರಲಾರಂಭಿಸಿವೆ. ಮಾರುಕಟ್ಟೆ ಈ ಫಲಿತಾಂಶಗಳ ಬಗ್ಗೆ ಸಹಜವಾಗಿ ಒಂದಿಷ್ಟು ನಿರೀಕ್ಷೆ , ಕುತೂಹಲಗಳನ್ನು ಇಟ್ಟುಕೊಂಡಿರುತ್ತದೆ. ಅದು ಹುಸಿಯಾದಾಗ , ಪ್ರತಿಕ್ರಿಯೆ ರೂಪದಲ್ಲಿ ಮಾರಾಟ ಆರಂಭಗೊಳ್ಳುತ್ತದೆ.ಕೆಲವು ಪ್ರಮುಖ ರಾಷ್ಟಗಳು ಎದುರಿಸುತ್ತಿರುವ ಆರ್ಥಿಕ ಹಿಂಜರಿಕೆ , ಕಲಹಗಳು , ಜೊತೆಯಲ್ಲಿ ಬೇರೆ ಕಾರಣಗಳು ದೇಶೀಯ ಉದ್ಯಮಗಳ ಮೇಲೂ ಪರಿಣಾಮ ಬೀರಿದ್ದು , ಅಭಿವೃದ್ದಿಗೂ ತೊಡಕಾಗಿವೆ.ಇದೇ ಕಾರಣದಿಂದ ಫಲಿತಾಂಶಗಳು ಪಾಸಿಟಿವ್ ಆಗಿಲ್ಲ.
3) ದುರ್ಬಲವಾಗಿರುವ ಜಾಗತಿಕ ಪ್ರಭಾವಗಳು
ಜಗತ್ತಿನಾದ್ಯಂತ ಉದ್ಯಮ ವಲಯದಲ್ಲಿ ಹಿಂಜರಿಕೆ ಕಂಡು ಬಂದಿದೆ. ದುರ್ಬಲವಾದ ಜಾಗತಿಕ ವಾತಾವರಣ ಷೇರು ಮಾರುಕಟ್ಟೆ ಮೇಲೆ ಅತೀವ ಪ್ರಭಾವವನ್ನು ಬೀರುತ್ತಿದೆ.
ಏಷ್ಯನ್, ಯುರೋಪಿಯನ್ ಮಾರುಕಟ್ಟೆಗಳು ದುರ್ಬಲವಾಗಿವೆ. ಯುಎಸ್‌ಎನ ಪ್ರಮುಖ ಕಂಪೆನಿಗಳಾದ ಟೆಸ್ಲಾ , ಅಲ್ಫಾಬೇಟ್ ಗಳ ಫಲಿತಾಂಶ ಕೂಡಾ ನಿರಾಶದಾಯಕವಾಗಿತ್ತು. ಜರ್ಮನಿಯಲ್ಲಿ ಉತ್ಪಾದನಾ ವಲಯದಲ್ಲಿ ಒತ್ತಡ ಕಂಡು ಬಂದಿದ್ದು , ನಿರೀಕ್ಷಿತ ಪ್ರಗತಿಯಾಗಿಲ್ಲ.
4) ದೇಶಿಯ ವಿತ್ತೀಯ ಸಂಸ್ಥೆಗಳ ಮಾರಾಟ
ವಿದೇಶಿ ವಿತ್ತೀಯ ಸಂಸ್ಥೆಗಳು ( ಎಫ್‌ಐಐ) ಮಾರುಕಟ್ಟೆಯಲ್ಲಿ ಸದಾ ಕಾಲ ದೊಡ್ಡ ಮಟ್ಟದಲ್ಲಿ ಪ್ರಾಫಿಟ್ ಬುಕ್ಕಿಂಗ್‌ನಲ್ಲಿ ತೊಡಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಸಂಸ್ಥೆಗಳ ಜೊತೆಯಲ್ಲಿ ದೇಶೀಯ ವಿತ್ತೀಯ ಸಂಸ್ಥೆಗಳು ( ಡಿಐಐ) ದೊಡ್ಡ ಮಟ್ಟದಲ್ಲಿ ಲಾಭವನ್ನು ನಗದೀಕರಿಸಲು ಆರಂಭಿಸಿವೆ. ಇದು ಮಾರುಕಟ್ಟೆಯಲ್ಲಿ ನೆಗೆಟಿವ್ ವಾತಾವರಣ ಸೃಷ್ಟಿಸಿದ್ದು , ಮಾರಾಟ ಒತ್ತಡ ಜಾಸ್ತಿಯಾಗ ತೊಡಗಿದೆ.
ಎಫ್‌ಐಐಗಳು ಮಾರಾಟ ಆರಂಭಿಸಿದರೆ ಡಿಐಐಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದವು.ಆಗ ಮಾರುಕಟ್ಟೆ ಸಮಸ್ಥಿತಿಯಲ್ಲಿ ಮುಂದುವರಿಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ತುಸು ಭಿನ್ನವಾಗಿ ಕಾಣುತ್ತಿದೆ.
5) ಬೇಡಿಕೆಯಿಲ್ಲದ ಪ್ರೀಮಿಯಂ ಉತ್ಪನ್ನಗಳು
ಜಾಗತಿಕ ಮಾರುಕಟ್ಟೆಯಲ್ಲಿ ಪ್ರೀಮಿಯಂ ಉತ್ಪನ್ನಗಳಿಗೆ ಹೆಚ್ಚಿನ ಒಲವು ಕಂಡು ಬರುತ್ತಿಲ್ಲ. ಪ್ರೀಮಿಯಂ ಉತ್ಪನ್ನಗಳ ಮಾರಾಟ ಕುಸಿತ ಕಾಣುತ್ತಿದೆ. ಹಾಗಾಗಿ ಉದ್ಯಮಗಳ ಬೆಳವಣಿಗೆ, ಸಾಧನೆಯಲ್ಲೂ ಇಳಿಮುಖ ಕಂಡಿದೆ.
ಇದೆಲ್ಲವೂ ಈಗ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದ್ದು , ಸದ್ಯಕ್ಕೆ ಸ್ವಲ್ಪ ಮಟ್ಟಿನ ಹಿಂಜರಿಕೆಗೆ ಕಾರಣವಾಗುತ್ತಿದೆ.
ಆದರೆ ಕೆಲವೊಂದು ಕ್ಷೇತ್ರದ ನಿರ್ದಿಷ್ಟ ಕಂಪೆನಿಗಳು ಅತ್ಯುತ್ತಮ ಸಾಧನೆಯನ್ನು ತೋರುತ್ತಿದ್ದು , ಅವುಗಳಲ್ಲಿ ದೀರ್ಘಕಾಲೀನ ಹೂಡಿಕೆ ದೊಡ್ಡ ಲಾಭವನ್ನು ತಂದು ಕೊಡ ಬಲ್ಲದು.

× Subscribe us