7 rupees

News @ your fingertips

ಶುಕ್ರವಾರ ರಾಜ್ಯದಲ್ಲಿ ಲೋಕ ಚುನಾವಣೆ ಘಟಾನುಘಟಿಗಳ ಭವಿಷ್ಯ

14 ಕ್ಷೇತ್ರಗಳಲ್ಲಿ ಮತದಾನ

ಎಪ್ರಿಲ್ 26 ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ , ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ. ಪ್ರಧಾನಿ ಮೋದಿ ಅಲೆ ಎಷ್ಟರ ಮಟ್ಟಿಗೆ ನೆರವಾಗಲಿದೆ ಎನ್ನುವುದು ನಿರ್ಧಾರವಾಗಲಿದೆ.

ಎಪ್ರಿಲ್ 26ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಇದು ದ್ವಿತೀಯ ಹಂತದ ಚುನಾವಣೆಯೆನಿಸಿದರೂ ರಾಜ್ಯದಲ್ಲಿ ನಡೆಯುವುದು ಮೊದಲು. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿ ಅಂದು ಆಯ್ಕೆಗಾಗಿ ಮತದಾನ ನಡೆಯಲಿದೆ.
ಈ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಸಂಜೆಗೆ ಬಹಿರಂಗ ಪ್ರಚಾರ ಮುಗಿಯಲಿದೆ. ಬಳಿಕ ಏನಿದ್ದರೂ, ಮತದಾರರ ವೈಯಕ್ತಿಕ ಭೇಟಿಗಷ್ಟೇ ಅವಕಾಶ.
ರಾಜ್ಯದಲ್ಲಿ ಈ ಬಾರಿ ಎರಡು ಪಕ್ಷಗಳ ನಡುವೆ ಪೈಪೋಟಿ ನಡೆದಿದೆ. ಈ ಬಾರಿ
ಚುನಾವಣಾ ರಂಗದಲ್ಲಿ ಮೊದಲಿನ ಅಬ್ಬರ ಇಲ್ಲದಿದ್ದರೂ, ಮಾತಿನ ಬಡಿಡಾಟ ಎಲ್ಲೇ ಮೀರಿದೆ. ಬಹಿರಂಗ ಪ್ರಚಾರಗಿಂತ ಮನೆಮನೆ ಭೇಟಿ ಈ ಸಲದ ವಿಶೇಷ .
ಜೆಡಿಎಸ್ ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾರಣ ರಾಜ್ಯದೆಲ್ಲೂ ಪಕ್ಷಗಳ ನಡುವಿನ ತ್ರಿಕೋನ ಸ್ಪರ್ಧೆಗೆ ಅವಕಾಶ ಇಲ್ಲದಂತಾಗಿದೆ. ಹಲವು ಕಡೆಗಳಲ್ಲಿ ಬಂಡಾಯ, ಪಕ್ಷೇತರರು ಸದ್ದು ಮಾಡಿದ್ದರೂ, ಅದು ಅಂತಿಮ ಹೋರಾಟದಲ್ಲಿ ಕಾಣುತ್ತಿಲ್ಲ.
ಎಪ್ರಿಲ್ 26 ರಾಜ್ಯದ 7 ಪ್ರಮುಖ ಕ್ಷೇತ್ರಗಳಲ್ಲಿ ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಂಗಳೂರು ಗ್ರಾಮಾಂತರದಿಂದ ಖ್ಯಾತ ವೈದ್ಯ ಡಾ ಸಿ.ಎನ್.ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸಿದ್ದು, ಹಾಲಿ ಸಂಸದ ಡಿ.ಕೆ. ಸುರೇಶ್ ಕಾಂಗ್ರೆಸ್ ಎದುರಾಳಿ. ಡಿಕೆಸಿ ಬ್ರದರ್ಸ್‌ಗಳಿಗೆ ಟಕ್ಕರ್ ನೀಡುವ ಉದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ಡಾ ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ಮಂಜುನಾಥ್ ಅವರು ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ಅಳಿಯ ಕೂಡಾ. ವೈದ್ಯರಾಗಿ ಅವರು ಗಳಿಸಿರುವ ಜನಪ್ರಿಯತೆಯ ಜೊತೆಯಲ್ಲಿ ಗೌಡರ ವರ್ಚಸ್ಸು , ಮೋದಿ ಅಲೆಯ ಪ್ರಭಾವದಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಬಿಜೆಪಿಯದ್ದು. ಡಿಕೆಸಿ ಬ್ರದರ್ಸ್‌ ತಂತ್ರಗಾರಿಕೆಯೇ ಭಿನ್ನ. ಹಾಗಾಗಿ ಇಲ್ಲಿ ಭಾರಿ ಪೈಪೋಟಿ ಇದೆ.
ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಿಂದ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಕಳೆದ ಬಾರಿ ಉಡುಪಿ- ಚಿಕಮಗಳೂರು ಪ್ರತಿನಿಧಿಸಿದ್ದ ಅವರು ಕ್ಷೇತ್ರದಲ್ಲಿನ ವಿರೋಧಿ ಅಲೆಯಿಂದ ಸ್ಥಾನ ಪಲ್ಲಟ ಮಾಡಿದ್ದಾರೆ. ಎದುರಾಳಿ ಕಾಂಗ್ರೆಸಿನ ರಾಜೀವ ಗೌಡ ಕೂಡಾ ಸಾಕಷ್ಟು ಪ್ರಭಾವಿ.ಹಾಗಾಗಿ ಪೈಪೋಟಿ ಜೋರು. ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಹಾಲಿ ಸಂಸದರು. ಈಗ ಎರಡನೇ ಬಾರಿ ಸ್ಪರ್ಧಿ. ಗೆಲವು ಸುಲಭ ಅನ್ನುವಂತಿಲ್ಲ , ಕಾರಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ. ಹಾಲಿ ಶಾಸಕಿ ಜೊತೆಯಲ್ಲಿ ಸಚಿವ ರಾಮಲಿಂಗರೆಡ್ಡಿ ಮಗಳು. ಎಲ್ಲ ಸಾಕಷ್ಟು ಪ್ರಭಾವಿ.
ಇನ್ನೂ ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೌಡ. ಹೆಸರು ಜೋರಿಲ್ಲ. ಆದರೆ ಇಲ್ಲಿ
ಸವಾಲು ಇರುವುದು ಮೈತ್ರಿ ಸಮನ್ವಯತೆಯದ್ದು .ಬಿಜೆಪಿಯ ಓಟುಗಳು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಅವರನ್ನು ಯಾವ ಪ್ರಮಾಣದಲ್ಲಿ ಕೈ ಹಿಡಿಯಲಿವೆ ಅನ್ನುವುದು ಇಲ್ಲಿ ಬಹುಮುಖ್ಯ. ಹೊರಗೆ ಹೊಂದಾಣಿಗೆ ಇದ್ದರೂ, ಒಳಗಿನ ಗುಟ್ಟು ಸ್ಪಷ್ಟವಿಲ್ಲ.
ಈ ಬಾರಿ ಚುನಾವಣೆ ಮುನ್ನವೇ ದೊಡ್ಡ ಸೌಂಡು ಮಾಡಿದ್ದು ಮೈಸೂರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಾಲಿ ಸಂಸದ ಪ್ರತಾಪ್‌ಸಿಂಹ ಬೇಸರಿದ್ದು, ಗೊಂದಲ ನಡೆದಿರುವುದು ಈಗ ಎಲ್ಲ ತಾರ್ಕಿಕ ಅಂತ್ಯ ಕಂಡಿದೆ. ರಾಜಮನೆತನದ ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ಎ.ಎಂ. ಲಕ್ಷ್ಪಣ ಎಷ್ಟರಮಟ್ಟಿಗೆ ಪೈಪೋಟಿ ನೀಡಬಲ್ಲರು ಎನ್ನುವುದನ್ನು ಗ್ರಹಿಸುವುದು ಕಷ್ಟ.
ತುಂಬಾನೇ ಕುತೂಹಲ ಕೆರಳಿಸಿರುವ ಇನ್ನೊಂದು ಕ್ಷೇತ್ರ ಮಂಡ್ಯ. ಇಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ. ಮೈತ್ರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಥಾನ ಬಿಟ್ಟು ಕೊಟ್ಟ ಕಾರಣ ಹಾಲಿ ಸಂಸದೆ ಸುಮಲತ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಸುಮಲತ ಈ ಬಾರಿ ಟಿಕೆಟ್ ಸಿಗದಿದ್ದರೂ ಬಂಡಾಯ ಎಳಲಿಲ್ಲ. ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಕುಮಾರಸ್ವಾಮಿ ಅವರಂತೆ ಕಾಂಗ್ರೆಸ್‌ಗೂ ಮಂಡ್ಯ ಕ್ಷೇತ್ರ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಅಧ್ಯರ್ಥಿ ವೆಂಕಟರಮಣೇ ಗೌಡ ಅವರ ವರ್ಚಸ್ಸು ಎಷ್ಟು ? ಮಾಜಿ ಮುಖ್ಯಮಂತ್ರಿ ಎದುರು ಅದು ವರ್ಕ್‌ಔಟ್‌ಆಗುತ್ತೆಯೇ ಎನ್ನುವುದು ಕೂಡಾ ಮುಖ್ಯ.
ಇನ್ನೂ ಉಳಿದಂತೆ ಉಡುಪಿ – ಚಿಕ್ಕಮಗಳೂರು, ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎಪ್ರಿಲ್ 26 ರಂದು ಮತದಾನ ನಡೆಯಲಿದೆ.
ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ತೃತೀಯ ಹಂತದಲ್ಲಿ ಚುನಾವಣೆ ನಡೆಯಲಿದೆ.