7 rupees

News @ your fingertips

ಒಟಿಟಿ ಸಿನಿಮಾರಂಗಕ್ಕೆ ಮಾರಕವಾಯಿತೇ ?

ಒಟಿಟಿ ಸಿನಿಮಾರಂಗಕ್ಕೆ ಮಾರಕವಾಯಿತೇ ?

ಒಟಿಟಿ ಬಂದ ಬಳಿಕ ಥಿಯೇಟರ್‌ಗಳಿಗೆ ಜನ ಹೋಗಲ್ಲ ಎನ್ನುವ ಭಾವನೆ ಕೆಲ ಸಮಯದ ಹಿಂದೆ ಮೂಡಿತ್ತು. ಅದ್ರೆ ಪ್ರೇಕ್ಷಕರು ಸಿನಿಮಾ ನೋಡಲು ಬಯಸುವುದು ಥಿಯೇಟರ್‌ಗಳಲ್ಲೇ ಮತ್ತೊಮ್ಮೆ ಸಾಬೀತಾಗಿದೆ.
ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದ್ದಂತೆ , ಜನರ ವರ್ತನೆಗಳಲ್ಲಿ ಬದಲಾವಣೆಗಳಾಗುವುದು ಸಹಜ. ಹಾಗಾಗಿ ಒಟಿಟಿ ಬಂದಾಗ ಸಾಕಷ್ಟು ಪ್ರಮಾಣದಲ್ಲಿ ಪ್ರೇಕ್ಷಕರು ಅದಕ್ಕೆ ಒಲವು ತೋರಿದ್ದು ಸಹಜವೇ. ಅದರೆ ಒಟಿಟಿ ಪ್ಲಾಟ್‌ಫಾರಂ ಎಷ್ಟಿದ್ದರೂ ಅದು ಮನೆ ವಾತಾವರಣಕ್ಕೆ ಸೀಮಿತ. ದೊಡ್ಡ ಪರದೆಯ ಮೇಲೆ ಸಿನಿಮಾವನ್ನು ನೋಡುವ , ನವ್ಯ ತಂತ್ರಜ್ಞಾನದಲ್ಲಿ ಸಂಗೀತವನ್ನು ಕೇಳುವ ಮಜಾವೇ ಬೇರೆ. ಒಟಿಟಿ ಈ ನಿಟ್ಟಿನಲ್ಲಿ ಪ್ರೇಕ್ಷಕ ಪ್ರಭುಗೆ ಸಪ್ಪೆ ಅನಿಸಿದ್ದು ನಿಜ.
ಇತ್ತೀಚಿನ ಭಾರತದಲ್ಲಿ ನಡೆಸಲಾಗಿರುವ ಸಮೀಕ್ಷೆವೊಂದರ ಪ್ರಕಾರ 10 ಮಂದಿಯಲ್ಲಿ 9 ಮಂದಿ ಹೊರಗಡೆ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಇಚ್ಚೆ ಪಡುತ್ತಿದ್ದಾರೆ. ಅವರ ಪ್ರಕಾರ ಹೊರಗಡೆ ಹೋಗಿ ಶಾಪಿಂಗ್ ಮಾಡಿ , ಸಿನಿಮಾ ನೋಡಿ ಮನೆಗೆ ಬರುವುದರಲ್ಲಿ ಇರುವ ಖುಷಿ , ಒಟಿಟಿಯಲ್ಲಿ ಸಿಗೋದಿಲ್ಲ ಎನ್ನುವುದು.
ಶೇ.98 ಪ್ರೇಕ್ಷಕರ ಹೇಳುವಂತೆ , ನಿಜವಾದ ಸಿನಿಮಾದ ಅನುಭವ ಸಿಗುವುದು ದೊಡ್ಡ ಪರದೆಯ ಮೇಲೆ ಮಾತ್ರ.
ಬುಕ್ ಮೈ ಶೋ ದೇಶದ 650 ಪಟ್ಟಣ ಹಾಗೂ ನಗರಗಳಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ , ದೊಡ್ಡ ಪರದೆಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಉಳಿದುಕೊಂಡಿದೆ. ಇದು ಭವಿಷ್ಯದ ಸಿನಿಮಾರಂಗಕ್ಕೆ ಅಶಾದಾಯಕ ಸಂಗತಿ ಎನ್ನುವುದು.
ಸಿನಿಮಾ ಕುರಿತ ಜನರ ಒಲವು ಇನ್ನೂ ಗಟ್ಟಿಯಾಗಿರುವುದು ಸಷ್ಟವಾಗಿದೆ. ಜೊತೆಯಲ್ಲಿ ಮೊದಲ ದಿನ ಮೊದಲ ಪ್ರದರ್ಶನದಲ್ಲಿ ಸಿನಿಮಾ ನೋಡುವ ಕ್ರೇಜ್ ಇನ್ನೂ ಅಭಿಮಾನಿ ಬಳಗದಲ್ಲಿ ಉಳಿದುಕೊಂಡಿರುವುದು ದೊಡ್ಡ ಪರದೆಗಳ ಭವಿಷ್ಯವನ್ನು ಭದ್ರಗೊಳಿಸಿದೆ.
ಕೋವಿಡ್ ಸಮಯದಲ್ಲಿ ಹಲವಾರು ಥಿಯೇಟರ್‌ಗಳು ಮುಚ್ಚಿ ಹೋದವು , ಮುಖ್ಯವಾಗಿ ಸಿಂಗಲ್ ಸ್ಕ್ರೀನ್ ಹೊಂದಿದ ಥಿಯೇಟರ್‌ಗಳು. ಇದೇ ಅವಧಿಯಲ್ಲಿ ಒಟಿಟಿ ಕೂಡಾ ಹೆಚ್ಚಿನ ಗಮನ ಸೆಳೆಯುವಂತಾಯಿತು. ಕೋವಿಡ್ ನಂತರ ಉಳಿದುಕೊಂಡ ಥಿಯೇಟರ್‌ಗಳಿಗೆ ಒಟಿಟಿ ಒಂದು ಹೊಸ ಸವಾಲಾಗಿ ಪರಿಣಮಿಸಿತು. 2022ರ ಅಂತ್ಯದವರೆಗೆ ಥಿಯೇಟರ್‌ಗಳಿಗೆ ಬರುವ ಪ್ರೇಕ್ಷರ ಸಂಖ್ಯೆ ವಿರಳವಾಗಿತ್ತು. ಬಳಿಕ ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ , ದೊಡ್ಡ ಪರದೆಗಳು ಜನರಿಗೆ ಹತ್ತಿರವಾಗತೊಡಗಿದವು.
ದೊಡ್ಡದಾಗಿರುವ ಪರದೆಗಳು ಮತ್ತು ಉನ್ನತ ಗುಣಮಟ್ಟದ ಅಡಿಯೋದಿಂದಾಗಿ ಥಿಯೇಟರ್‌ಗಳು ಅತ್ಯುತ್ತಮ ಅನುಭವವನ್ನು ಸೃಷ್ಟಿ ಮಾಡುತ್ತವೆ ಎನ್ನುವುದು ಶೇ. 74 ಮಂದಿ ಪ್ರೇಕ್ಷಕರ ಅಭಿಮತವಾಗಿದೆ.
ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು ನೋಡಲು ಯಾವುದೇ ಭಾಷೆಯ ನಿರ್ಬಂಧಗಳಿಲ್ಲ. ಅದರೆ ಮನೆಗಳಲ್ಲಿ ಆಯ್ದ ಭಾಷೆಗಳ ಸಿನಿಮಾಗಳನ್ನು ಮಾತ್ರ ನೋಡಲಾಗುತ್ತದೆ ಎನ್ನುವ ಆಶ್ಚರ್ಯಕರ ಅಂಶವೂ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದಕ್ಕೆ ಹೆಚ್ಚಿನ ಪ್ರೇಕ್ಷಕರು ಒಲವು ತೋರಿಸುವುದು ಮಾತ್ರ ಸಿನಿಮಾರಂಗಕ್ಕೆ ಚೇತೋಹರಿ ಬೆಳವಣಿಗೆಯಾಗಿದೆ.

× Subscribe us