ಜನಸಾಮಾನ್ಯರಿಗೂ ಚಿರಪರಿಚಿತವಾಗಿರುವ ಡಿಮಾರ್ಟ್ (ಅವೆನ್ಯೂ ಸೂಪರ್ಮಾರ್ಟ್ಸ್) ಸಂಸ್ಥಾಪಕ , ಹೂಡಿಕೆದಾರ ರಾಧಾಕಿಶನ್ ದಮಾನಿ ಕನ್ನಡ ತಯಾರಿಕೆ ಹಾಗೂ ಮಾರಾಟ ಸಂಸ್ಥೆ ಲೆನ್ಸ್ಕಾರ್ಟ್ ಸೊಲ್ಯೂಷನ್ಸ್ನ ಐಪಿಒ ಪೂರ್ವ (ಆರಂಭಿಕ ಸಾರ್ವಜನಿಕ ಕೊಡುಗೆ) ಹೂಡಿಕೆ ಸುತ್ತಿನಲ್ಲಿ 90 ಕೋಟಿ ರೂ.ಗಳ ಬಂಡವಾಳಕ್ಕೆ ಮುಂದಾಗಿದ್ದಾರೆ.
ಮುಂದಿನ ವಾರ ಲೆನ್ಸ್ಕಾರ್ಟ್ನ ಐಪಿಒ ಸಾರ್ವಜನಿಕರಿಗಾಗಿ ತೆರೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಹೂಡಿಕೆ ಪ್ರಕಟವಾಗಿದೆ. ಈಕ್ವಿಟಿ ಷೇರುಗಳ ಹೊಸ ವಿತರಣೆಯ ಮೂಲಕ 2,150 ಕೋಟಿ ರೂ.ಗಳನ್ನು ಸಂಗ್ರಹಿಸಲು ಲೆನ್ಸ್ಕಾರ್ಟ್ ಮುಂದಾಗಿದೆ. ಪ್ರವರ್ತಕರು ಮತ್ತು ಹೂಡಿಕೆದಾರರು 13.22 ಕೋಟಿ ಈಕ್ವಿಟಿ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ.
ಲೆನ್ಸ್ಕಾರ್ಟ್ ಐಪಿಒದಿಂದ ಬರುವ ಬಂಡವಾಳವನ್ನು ಸಂಸ್ಥೆಯ ವಿವಿಧ ಕಾರ್ಯತಂತ್ರದ ಉಪಕ್ರಮಗಳಿಗೆ ಬಳಸಿಕೊಳ್ಳಲು ಪ್ರಸ್ತಾಪಿಸಿದೆ. ಇದರಲ್ಲಿ ಭಾರತದಲ್ಲಿ ಕಂಪನಿ ನಿರ್ವಹಿಸುವ ಕಂಪನಿ-ಮಾಲೀಕತ್ವದ (ಕೋಕೋ) ಮಳಿಗೆ ಜಾಲಗಳ ವೃದ್ಧಿ ,ತಂತ್ರಜ್ಞಾನ ಮತ್ತು ಕ್ಲೌಡ್ ಮೂಲಸೌಕರ್ಯದಲ್ಲಿ ಹೂಡಿಕೆಗಳು, ಬ್ರ್ಯಾಂಡ್ ಮಾರ್ಕೆಟಿಂಗ್ ಮತ್ತು ವ್ಯಾಪಾರ ಪ್ರಚಾರ ಉದ್ದೇಶಗಳು ಸೇರಿವೆ.
ಭಾರತದ ಅತಿದೊಡ್ಡ ಓಮ್ನಿ-ಚಾನೆಲ್ ಐವೇರ್ ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾದ ಲೆನ್ಸ್ಕಾರ್ಟ್ ತನ್ನ ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ವ್ಯಾಪಕವಾದ ಚಿಲ್ಲರೆ ಜಾಲದ ಮೂಲಕ ಕೈಗೆಟುಕುವ ಮತ್ತು ಫ್ಯಾಶನ್ ಪ್ರಿಸ್ಕ್ರಿಪ್ಷನ್ ಕನ್ನಡಕಗಳು, ಸನ್ ಗ್ಲಾಸ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ಗಳ ವ್ಯಾಪಕ ಶ್ರೇಣಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.
2008 ರಲ್ಲಿ ಸ್ಥಾಪನೆಯಾದ ಲೆನ್ಸ್ಕಾರ್ಟ್ 2010 ರಲ್ಲಿ ಆನ್ಲೈನ್ ಐವೇರ್ ವೇದಿಕೆ ಮೂಲಕ ಗ್ರಾಹಕರನ್ನು ತಲುಪಲು ಆರಂಭಿಸಿತು. 2013 ರಲ್ಲಿ ನವದೆಹಲಿಯಲ್ಲಿ ಮೊದಲ ಮಳಿಗೆಯನ್ನು ತೆರೆಯಿತು. ನಂತರದ ವರ್ಷಗಳಲ್ಲಿ ಅದು ಕನ್ನಡಕ ವಿಭಾಗದಲ್ಲಿ ದೇಶದ ಪ್ರಮುಖ ಗ್ರಾಹಕ ಬ್ರ್ಯಾಂಡ್ಗಳಲ್ಲಿ ಒಂದಾಗಿ ಬೆಳವಣಿಗೆ ಕಂಡಿದೆ.
ಕಂಪನಿಯು ಭಾರತದ ಮೆಟ್ರೋ, ಟೈರ್-1 ಮತ್ತು ಟೈರ್-2 ನಗರಗಳಲ್ಲಿ ಜೊತೆಯಲ್ಲಿ ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಅಂತಾರಾಷ್ಟ್ರೀಯ ಪ್ರಸ್ತುತಿಯನ್ನು ಹೊಂದಿದೆ.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ