ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಚಿಕಿತ್ಸೆ ವೆಚ್ಚಗಳು ಹೊರೆಯಾಗದಂತೆ ನೆರವಾಗುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಈಗಾಗಲೇ ಆರಂಭವಾಗಿದೆ.
ಗ್ರಾಮೀಣ ಭಾರತಕ್ಕೆ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ಧ್ಯೇಯವನ್ನು ಹೊಂದಿದ್ದ ಮಣಿಪಾಲ್ ಸಂಸ್ಥೆಯ ಸಂಸ್ಥಾಪಕ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ನಾಯಕತ್ವ ಇಷ್ಟೊಂದು ಸಾಧನೆಗೆ ಕಾರಣವಾಗಿದೆ. 2000 ನೇ ವರ್ಷದಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. 24 ವರ್ಷಗಳಲ್ಲಿ, ಲಕ್ಷಾಂತರ ಫಲಾನುಭವಿಗಳಿಗೆ ವರದಾನವಾಗಿದೆ ಎಂದು ಮಾಹೆ ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ ನಾಕ್ ವಿವರಿಸಿದ್ದಾರೆ.
2000 ನೇ ಇಸವಿಯಲ್ಲಿ, 10500 ಸದಸ್ಯರು ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯಡಿ ನೋಂದಣಿ ಮಾಡಿದ್ದರು. ಕಳೆದ ಹಣಕಾಸು ವರ್ಷದಲ್ಲಿ 3.68 ಲಕ್ಷ ಕುಟುಂಬಗಳು ಈ ಯೋಜನೆಗಳ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದು ತಿಳಿಸಿದರು.
ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಮತ್ತು ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಘೀರ್ ಸಿದ್ದಿಕಿ ಮಾತನಾಡಿ ಈ ಯೋಜನೆಯಡಿಯಲ್ಲಿ ಒಂದು ವರ್ಷ ಮತ್ತು ಎರಡು ವರ್ಷಗಳ ಸದಸ್ಯತ್ವ ಆಯ್ಕೆಗಳನ್ನು ನೀಡುತ್ತಿದ್ದೇವೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬುದು ಮಣಿಪಾಲ್ ಆರೋಗ್ಯಕಾರ್ಡ್ ನ ಧ್ಯೇಯ ವಾಕ್ಯ. ಮಣಿಪಾಲ್ ಸಮೂಹ ಆಸ್ಪತ್ರೆಗಳಾದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಕೆ.ಎಂ.ಸಿ. ಆಸ್ಪತ್ರೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ್ತ, ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಹಾಗೂ ಮಣಿಪಾಲ್ ಆಸ್ಪತ್ರೆ ಗೋವಾಗಳಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು. ಈ ಕಾರ್ಡ್‌ನ ಸೌಲಭ್ಯಗಳು ದಂತ ಚಿಕಿತ್ಸೆಗೂ ಅನ್ವಯವಾಗಲಿದ್ದು ಕಾರ್ಡುದಾರರು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಮತ್ತು ಮಣಿಪಾಲದಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು ಎಂದು ತಿಳಿಸಿದರು.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ