7 rupees

News @ your fingertips

ಫಲಿತಾಂಶ ಉತ್ತಮ, ಆದರೆ ಷೇರುಗಳಿಗೆ ಬೇಡಿಕೆ ಇಲ್ಲ

ಖಾಸಗಿ ವಲಯದ ಯೆಸ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಅತ್ಯುತ್ತಮ ಫಲಿತಾಂಶ ನೀಡಿದರೂ , ಷೇರುಗಳ ಬೆಲೆ ಕುಸಿತ ಕಂಡಿದೆ.
ಯಾಕೆ ಹೀಗೆ ಎನ್ನುವುದು ಸಾಮಾನ್ಯ ಹೂಡಿಕೆದಾರರು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ.
ಮೊನ್ನೆಯಷ್ಟೇ ಯೆಸ್ ಬ್ಯಾಂಕ್ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಈ ಅವಧಿಯಲ್ಲಿ 502.43 ಕೋ.ರೂ. ನಿವ್ವಳ ಲಾಭ ದಾಖಲಿಸಿದೆ. ಕಳೆದ ತ್ರೈ ಮಾಸಿಕಕ್ಕೆ ಹೋಲಿಸಿದರೆ ಶೇ.46.4ರಷ್ಟು ಅಧಿಕ ಲಾಭವನ್ನು ಗಳಿಸಿದೆ. ಸಾಮಾನ್ಯವಾಗಿ ಕಂಪೆನಿಗಳು ಉತ್ತಮ ಫಲಿತಾಂಶವನ್ನು ನೀಡಿದಾಗ ಸಹಜವಾಗಿ ಷೇರುಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬರುತ್ತದೆ . ಕೆಲವೊಮ್ಮೆ ಬೆಲೆ ನಾಗಾಲೋಟ ಕಾಣುವುದೂ ಇದೆ. ಅದರೆ ಯೆಸ್ ಬ್ಯಾಂಕಿನ ವಿಚಾರದಲ್ಲಿ ಲೆಕ್ಕಾಚಾರ ಉಲ್ಟಾ ಆಗಿವೆ. ಫಲಿತಾಂಶ ಬಳಿಕ ಷೇರುಗಳ ಬೆಲೆ ಸ್ವಲ್ಪ ಏರುಗತಿ ಕಂಡಿತು. 25.65 ರೂ.ಗಳ ನಂತರ ಅದು ಪಾಸಿಟಿವ್ ಟ್ರೆಂಡ್ ತೋರಲಿಲ್ಲ.ನಂತರದ ವಹಿವಾಟು ಅವಧಿಗಳಲ್ಲಿ ಅದು ಇಳಿಮುಖ ಹಾದಿಯಲ್ಲಿದೆ.
ಹೂಡಿಕೆದಾರರಿಗೆ ಬ್ಯಾಂಕಿನ ಬಗ್ಗೆ ಇರುವ ಅತಂಕ ಇನ್ನೂ ಮುಂದುವರಿದಿದಿದೆಯೇ ? ಎನ್ನುವ ಪ್ರಶ್ನೆ ಕಾಡುತ್ತಿದೆ.
ಆದರೆ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ , ಬ್ಯಾಂಕಿನ ಬಗ್ಗೆ ಯಾವುದೇ ಅಂತಹ ಅತಂಕಗಳಿಲ್ಲ. ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ತನ್ನ ಸಾಧನೆಯನ್ನು ಬಲಪಡಿಸುತ್ತಲೇ ಬಂದಿದೆ. ಕಳೆದ ಕೆಲವು ದಿನಗಳಲ್ಲಿ ಬ್ಯಾಂಕಿನ ಷೇರುಗಳು ಅಲ್ಪ ಮಟ್ಟಿನ ಏರಿಕೆಯನ್ನು ಕಂಡ ಕಾರಣಕ್ಕೆ ಆ ಹಂತದಲ್ಲಿ ಹೂಡಿಕೆದಾರರು ಲಾಭವನ್ನು ನಗದೀಕರಿಸಲು ಮುಂದಾಗಿರುವುದು ಕುಸಿತಕ್ಕೆ ಮೊದಲ ಕಾರಣ. ಜೊತೆಯಲ್ಲಿ ಕೇಂದ್ರ ಸರಕಾರ ಐಡಿಬಿಐ ಬ್ಯಾಂಕಿನಲ್ಲಿನ ತನ್ನ ಪಾಲನ್ನು ಮಾರಾಟ ಪ್ರಸ್ತಾವನೆ ಪ್ರಕಟಿಸಿದೆ. ಯೆಸ್ ಬ್ಯಾಂಕಿನಲ್ಲಿ ದೊಡ್ಡ ಹೂಡಿಕೆ ಮಾಡಿರುವ ಎಸ್‌ಬಿಐ ಕೂಡಾ ತನ್ನ ಪಾಲನ್ನು ಹಿಂಪಡೆದುಕೊಳ್ಳುವ ಸುದ್ದಿಯೂ ಹರಡಿತು.ಈ ಗೊಂದಲಕ್ಕೆ ಸಿಲುಕಿದ ಹೂಡಿಕೆದಾರರು ಮಾರಾಟಕ್ಕೆ ಮುಂದಾಗಿರುವುದೇ ಬ್ಯಾಂಕಿನ ಷೇರುಗಳು ಕುಸಿಯಲು ಕಾರಣ.
ಈ ನಡುವೆ ಎಸ್‌ಬಿಐ ಬ್ಯಾಂಕ್‌ನ ಮೂಲಗಳು , ಸದ್ಯ ಯೆಸ್ ಬ್ಯಾಂಕಿನ ತನ್ನ ಪಾಲನ್ನು ಮಾರಾಟ ಮಾಡುವ ಯಾವುದೇ ಇರಾದೆ ಇಲ್ಲ ಎನ್ನುವ ಮಾಹಿತಿಯನ್ನು ನೀಡಿದೆ. ಅದರೂ ಹೂಡಿಕೆದಾರರು ಹೆಚ್ಚಿನ ಸ್ಪಂದನೆಯನ್ನು ನೀಡಿಲ್ಲ. ಗುರುವಾರ ಕೂಡಾ ಬ್ಯಾಂಕಿನ ಷೇರುಗಳು ಶೇ.1ರಷ್ಟು ಕುಸಿದಿದ್ದು , 24.64 ರೂ.ಯಲ್ಲಿ ವಹಿವಾಟು ನಡೆಸಿವೆ.
ಈ ಗೊಂದಲಗಳು ನಿವಾರಣೆಯಾದ ಬಳಿಕ ಬ್ಯಾಂಕಿನ ಷೇರುಗಳು ಮತ್ತೆ ಚೇತರಿಸಿಕೊಳ್ಳುವ ಲಕ್ಷಣಗಳಿವೆ.

 

 

.

× Subscribe us