7 rupees

News @ your fingertips

ಬೆಳ್ಳಿ ಓಡುತ್ತಿದೆ… ಕೈಗೆ ಸಿಗುವುದು ಕಷ್ಟ

ಬೆಳ್ಳಿ -ಬಂಗಾರ ದರ ಇತ್ತೀಚಿನ ದಿನಗಳಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಏರಿಕೆ ಕಾಣುತ್ತಿದೆ.
ಮುಂದಿನ ದಿನಗಳಲ್ಲಿ ಇವೆರಡರ ಬೆಲೆ ಜನ ಸಾಮಾನ್ಯರ ಕೈ ತಪ್ಪಲಿದೆಯೇ ?
ಹಾಗಂತ ಮಾತುಗಳು ಮಾರುಕಟ್ಟೆಯನ್ನು ಅವರಿಸಿಕೊಳ್ಳುತ್ತಿದೆ.
ಬೆಲೆಬಾಳುವ ಲೋಹವೆಂದೆ ಪರಿಚಿತವಾದ ಇವುಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಏರಿಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಕಾಲಿಕ ದಾಖಲೆಯನ್ನು ಕಾಣುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಬೆಳ್ಳಿ ದರ 2026 ಜನವರಿ ಹೊತ್ತಿಗೆ ಕೆಜಿಗೆ 1.60 ಲಕ್ಷ ರೂ.ಗಳನ್ನು ದಾಟಬಹುದು. ಚಿನ್ನ 10 ಗ್ರಾಮ್‌ಗಳಿಗೆ 1.20 ಲಕ್ಷ ರೂ.ಗಳಿಗೆ ಏರುವ ನಿರೀಕ್ಷೆ ಇದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಮತ.
ಜಾಗತಿಕ ಮತ್ತು ದೇಶೀಯ ವಿದ್ಯಮಾನಗಳು , ಬೇಡಿಕೆಗಳ ಸಂಯೋಜನೆಯಿಂದ ಭಾರತೀಯ ಮಾರುಕಟ್ಟೆಗಳಲ್ಲಿ ಬೆಳ್ಳಿ ಮೊದಲ ಬಾರಿಗೆ 1,14,000 ರೂ.ಗಳನ್ನು ದಾಟಿದೆ. ವಿಶ್ಲೇಷಕರ ಪ್ರಕಾರ 2026 ಅಂತ್ಯಕ್ಕೆ 2,00,000 ರೂ.ಗಳನ್ನು ತಲುಪುವ ಸಾಧ್ಯತೆಗಳಿವೆ. ಜನವರಿ ಹೊತ್ತಿನಲ್ಲಿ 1,60, 000 ರೂ.ಗಳ ಅಲ್ಪಾವಧಿಯ ಗುರಿಯನ್ನು ಅವರು ಅಂದಾಜಿಸಿದ್ದಾರೆ.
ಈ ವರ್ಷ ಬೆಳ್ಳಿ ಶೇ. 30 ಲಾಭವನ್ನು ಗಳಿಸಿಕೊಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಮಾರು 14 ವರ್ಷಗಳ ಗರಿಷ್ಠ ಮಟ್ಟದಲ್ಲಿ ಸದ್ಯ ಅದು ವಹಿವಾಟು ನಡೆಸುತ್ತಿದೆ. ಸೆಪ್ಟೆಂಬರ್ 2011 ರ ನಂತರ ಮೊದಲ ಬಾರಿಗೆ, ಬೆಳ್ಳಿ ಬೆಲೆಗಳು ಟ್ರಾಯ್ ಔನ್ಸ್‌ಗೆ 39ಡಾಲರ್ ಅನ್ನು ಮೀರಿದೆ.
ಬೆಳ್ಳಿ ದರ ಏರಿಕೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಉದ್ಯಮದ ಬೇಡಿಕೆ ಒಂದು. ವಿಶೇಷವಾಗಿ ಸಾಂಪ್ರದಾಯಿಕ ಇಂಧನಗಳಿಂದ ಹಸಿರು ಪರ್ಯಾಯ ಇಂಧನಗಳಿಗೆ ಜಾಗತಿಕ ಪರಿವರ್ತನೆ ಕಂಡು ಬರುತ್ತಿದ್ದು , ಅಲ್ಲಿನ ಹೆಚ್ಚುತ್ತಿರುವ ಕೈಗಾರಿಕಾ ಬೇಡಿಕೆ ದರವನ್ನು ಮೇಲೆಕ್ಕೇರಿಸುತ್ತಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಬೆಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ, ಸೌರ ಫಲಕಗಳು, ವಿದ್ಯುತ್ ವಾಹನಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳಲ್ಲಿ ಬೆಳ್ಳಿ ಬಳಕೆ ಅಧಿಕವಾಗುತ್ತಿದೆ. ಆದರೆ ಜಾಗತಿಕ ಮಟ್ಟದಲ್ಲೂ ಬೆಳ್ಳಿ ಉತ್ಪಾದನೆಯಲ್ಲಿ ಮಾತ್ರ ಹೆಚ್ಚಳವಾಗುತ್ತಿಲ್ಲ.
ಇನ್ನೊಂದು ಕಡೆಯಲ್ಲಿ ಚಿನ್ನದ ದರವೂ ಗಗನಮುಖಿಯಾಗಿರುವ ಕಾರಣ ಜನ ಸಾಮಾನ್ಯರು ಬೆಳ್ಳಿ ಆಭರಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಕೂಡಾ ಬೆಳ್ಳಿಯ ಬುಲಿಷ್ ಓಟ ಸಾಥ್ ನೀಡುತ್ತಿದೆ.
ಹೂಡಿಕೆದಾರರು ಕೂಡಾ ಬೆಳ್ಳಿ ಇಟಿಎಫ್‌ಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತಳೆಯುತ್ತಿದ್ದಾರೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಯುಎಸ್ ವ್ಯಾಪಾರ ನೀತಿಗಳಲ್ಲಿನ ಅನಿಶ್ಚಿತತೆ ಲೋಹಗಳ ಬೇಡಿಕೆಯನ್ನು ಅಧಿಕಗೊಳಿಸಿದೆ. ವ್ಯಾಪಾರ ಸುಂಕಗಳು ಮತ್ತು ಅಮೆರಿಕನ್ ಆರ್ಥಿಕತೆಯುಲ್ಲಿ ಮಂದಗತಿ , ಯುಎಸ್ ಡಾಲರ್ ದುರ್ಬಲವಾಗುತ್ತಿರುವುದು ಬೆಳ್ಳಿ ಹೂಡಿಕೆದಾರರಿಗೆ ಆಕರ್ಷಕವಾಗಿ ಕಂಡು ಆದ್ಯತೆಯ ಹೂಡಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಅಲ್ಪ ಕುಸಿತ ಕಂಡರೂ , ದೀರ್ಘಾವಧಿಯಲ್ಲಿ ಬೆಳ್ಳಿ ದರ ಏರುಗತಿಯಲ್ಲೇ ಸಾಗಲಿದೆ ಎನ್ನುವುದು ತಜ್ಞರ ಗಟ್ಟಿ ನಿಲುವಾಗಿದೆ.

( ಸೂಚನೆ : ಈ ಮಾಹಿತಿಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ಹೂಡಿಕೆ ಶಿಫಾರಸು ಅಲ್ಲ. ಹೂಡಿಕೆಗಾಗಿ ತಜ್ಞರೊಂದಿಗೆ ಸಮಾಲೋಚಿಸಿ)