7 rupees

News @ your fingertips

ಮತ್ತೆ ಐಪಿಒ ಭರಾಟೆ : ಬ್ಲಾಕ್‌ ಬಸ್ಟರ್ ಲಿಸ್ಟಿಂಗ್

ಭಾರತದ ಷೇರು ಮಾರುಕಟ್ಟೆಯಲ್ಲಿ ಮತ್ತೆ ಉತ್ಸಾಹ ಕಂಡು ಬರುತ್ತಿದೆ. 2025ನೇ ಸಾಲಿನಲ್ಲಿ ಅಧಿಕ ಪ್ರಮಾಣದ ಐಪಿಒ ಗಳು ಮಾರುಕಟ್ಟೆಗೆ ಬರುತ್ತಿದ್ದು , ಕೆಲವು ಬ್ಲಾಕ್‌ಬಸ್ಟರ್ ಗಳಿಕೆಯನ್ನು ನೀಡಿವೆ. ಇನ್ನೂ ಹಲವು ಪ್ರಮುಖ ಕಂಪೆನಿಗಳು ಐಪಿಒ ಸರದಿಯಲ್ಲಿವೆ. ಇನ್ನೊಂದು ಕಡೆಯಲ್ಲಿ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು ಮಾರುಕಟ್ಟೆಯ ಏರಿಳಿತ ನಡುವೆ ತಮ್ಮ ಹೂಡಿಕೆಯನ್ನು ಸ್ಥಿರಗೊಳಿಸುತ್ತಿವೆ.
ಇದೆಲ್ಲವೂ ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಇಮ್ಮಡಿಗೊಳಿಸಿದೆ.
ಮಾರುಕಟ್ಟೆಯ ಮಾಹಿತಿ ಪ್ರಕಾರ, ಜುಲೈ 2025 ರವರೆಗೆ ಕಳೆದ ಮೂರು ತಿಂಗಳಲ್ಲಿ 163 ಐಪಿಒ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಒಟ್ಟು 67,000 ಕೋಟಿ ರೂ. ಸಂಗ್ರಹಕ್ಕೆ ಪ್ರಯತ್ನಿಸಿವೆ. ಆಗಸ್ಟ್ ತಿಂಗಳಲ್ಲೂ ಐಪಿಒಗಳ ಭರಾಟೆ ಮುಂದುವರಿದಿದೆ. ಈ ಹೊತ್ತಲ್ಲಿ ಜಿಂದಾಲ್ ಸಿಮೆಂಟ್‌ನಂತಹ ಅನೇಕ ದೊಡ್ಡ ಕಂಪೆನಿಗಳು ಷೇರು ಮಾರುಕಟ್ಟೆ ಪ್ರವೇಶಿಸಲಿವೆ. ಮತ್ತಷ್ಟು ಕಂಪೆನಿಗಳು ಐಪಿಒ ಸಿದ್ದತೆ ನಡೆಸಿದ್ದು , ಸರದಿಯಲ್ಲಿವೆ.
ಐಪಿಒ ನಂತರ ಲಿಸ್ಟಿಂಗ್‌ನಲ್ಲಿ ದೊಡ್ಡ ಮಟ್ಟದ ಗಳಿಕೆ , ಸಾಂಸ್ಥಿಕ ಸಂಸ್ಥೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಹಂಚಿಕೆ ಷೇರು ಮಾರುಕಟ್ಟೆಯನ್ನು ಹೆಚ್ಚು ಆಕರ್ಷಿತಗೊಳಿಸಿದೆ. ಟ್ರಂಪ್ ಸುಂಕ ಸಂಕಷ್ಟದ ನಡುವೆಯೂ ಮಾರುಕಟ್ಟೆ ತನ್ನ ಪ್ರಭಾವವನ್ನು ಉಳಿಸಿಕೊಂಡಿರುವುದು , ಹೂಡಿಕೆದಾರರಲ್ಲಿ ಮತ್ತಷ್ಟು ವಿಶ್ವಾಸ ತುಂಬಲು ಕಾರಣವಾಗಿದೆ.
ಎಫ್‌ಐಐ ಹಾಗೂ ಮ್ಯೂಚುವಲ್ ಫಂಡ್‌ಗಳು ಐಪಿಒಗಳಲ್ಲಿ ಹೆಚ್ಚಿನ ಒಲವನ್ನು ತೋರುತ್ತಿವೆ. ಕಳೆದ ಮೂರು ತಿಂಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಸುಮಾರು 5000 ಕೋಟಿ ರೂ.ಯಷ್ಟು ಹಣವನ್ನು ಐಪಿಒ ನಲ್ಲಿ ತೊಡಗಿಸಿಕೊಂಡಿವೆ. ಎಫ್‌ಐಐ ಗಳೂ ಕೂಡಾ ಹಾಲಿ ಈಕ್ವಿಟಿ ಮಾರುಕಟ್ಟೆಯಿಂದ ಹಣವನ್ನು ನಗದೀಕರಿಸಿ , ಐಪಿಒಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿವೆ.
ಚಿನ್ನ ಹಾಗೂ ಬೆಳ್ಳಿ ದರವೂ ನಿರೀಕ್ಷೆಗಿಂತ ಹೆಚ್ಚುತ್ತಿರುವುದು ಕೂಡಾ ಈಕ್ವಿಟಿ ಮಾರುಕಟ್ಟೆಯನ್ನು ಉಲ್ಲಾಸಿತಗೊಳಿಸಿದೆ.